ಒಂದ್ ದಿನ ಕಾರವಾರ ಎಕ್ಸ್ ಪ್ರೆಸ್ಸಲ್ಲಿ ಒಬ್ಬ ಯುವಕ (ಸುಮಾರು 24-25 ವರ್ಷ ಇರಬಹುದು) ಅವರಪ್ಪನ ಜೊತೆ ಪ್ರಯಾಣ ಮಾಡ್ತಿದ್ನಂತೆ. ಬೇಕಂತ ಇಬ್ಬರೂ ಕಿಟಕಿ ಪಕ್ಕದ ಸೀಟ್ ತೊಗೊಂಡಿರ್ತಾರೆ... ಎದರಾ ಬದರಾ ಕೂತು ಮಾತಾಡ್ಕೊಂಡ್ ಬರಬಹುದು ಅಂತ.
ಟ್ರೇನ್ ಸ್ಟೇಶನ್ ಬಿಟ್ಟು ಒಂದೆರಡು ಗಂಟೆ ಆಗ್ತಿದ್ದಂಗೇ ಆ ಯುವಕ ಎಲ್ಲರಿಗೂ ಕೇಳಿಸೋ ಹಾಗೆ "ಅಪ್ಪಾ ನೋಡಪ್ಪಾ! ಮರಗಳೆಲ್ಲ ಹಿಂದ್-ಹಿಂದಕ್ಕೆ ಹೋಗ್ತಿವೆ!" ಅಂದನಂತೆ. ಅದನ್ನ ಕೇಳಿ ಅವರಪ್ಪ ಮುಗುಳ್ನಕ್ಕಿ ತನ್ನ ಪಾಡಿಗೆ ತಾನು ವಾಪಸ್ ಪೇಪರ್ ಓದೋದು ಮುಂದುವರೆಸ್ತಾನೆ.
ಆದರೆ ಪಕ್ಕದಲ್ಲಿ ಕೂತಿದ್ದೋರಿಗೆ ಸ್ವಲ್ಪ ಮುಜುಗರ... ಇದೇನಪ್ಪಾ ಒಳ್ಳೇ ತನ್ನ ಕಾಲ ಮೇಲೆ ತಾನು ನಿಂತು ಸಂಪಾದನೆ ಮಾಡೋ ವಯಸ್ಸಿನ ಹುಡುಗ ಹೀಗೆ ಹೇಳಿದನಲ್ಲ ಅಂತೆ...
ಅಷ್ಟರಲ್ಲಿ ಅವನು ಮತ್ತೆ "ಅಪ್ಪಾ ನೋಡು! ನೋಡು! ಮೋಡಗಳು ನಮ್ಮ ಜೊತೇನೇ ಬರ್ತಿವೆ...!" ಅಂತ ಹೇಳಿದನಂತೆ...
ಈ ಸಲ ಪಕ್ಕದಲ್ಲಿ ಕೂತಿದ್ದೋನು ಅವರಪ್ಪನಿಗೆ ಮೆಲ್ಲಗೆ ಕಿವಿಯಲ್ಲಿ ಹೇಳಿದನಂತೆ... "ನಿಮ್ಮ ಮಗನ್ನ ಯಾರಾದರೂ ಡಾಕ್ಟರ್ ಹತ್ತಿರ ತೋರಿಸೋದು ಒಳ್ಳೇದು..." ಅಂತ.
ಆಗ ಅವರಪ್ಪ "ಕರ್ಕೊಂಡ್ ಹೋಗಿದ್ದೆ... ಆಸ್ಪತ್ರೆಯಿಂದಾನೇ ವಾಪಸ್ ಬರ್ತಿದೀವಿ ಸಾರ್... ಎಷ್ಟೋ ವರ್ಷಗಳಿಂದ ಕಷ್ಟ ಪಡ್ತಾ ಇದ್ವಿ... ನನ್ನ ಮಗನಿಗೆ ಹುಟ್ಟಿನಿಂದ ಕಣ್ಣು ಕಾಣಿಸ್ತಾ ಇರಲಿಲ್ಲ... ಆದರೆ ದೇವರ ದಯೆಯಿಂದ ನೆನ್ನೆಯಿಂದ ಅವನಿಗೆ ಕಣ್ಣು ಕಾಣಿಸ್ತಿದೆ... ಇನ್ನೂ ಒಂದೆರಡು ಸಲ ಆಸ್ಪತ್ರೆಗೆ ಬನ್ನಿ ಅಂದಿದಾರೆ..." ಅಂದಾಗ ಪಕ್ಕದಲ್ಲಿದ್ದ ವ್ಯಕ್ತಿಗೆ ಬಾಯಲ್ಲಿ ಮಾತೇ ಹೊರಡಲಿಲ್ಲ...
ನೀತಿ: ಪ್ರತಿಯೊಬ್ಬರ ನಡತೆಗೂ ಒಂದು ಕಾರಣ ಇರುತ್ತೆ. ಅವರನ್ನ ನೋಡಿ ನಾವು ದುಡುಕಿ ಏನೇನೋ ಅನ್ಕೊಳೋದು ಅಷ್ಟು ಸರಿಯಲ್ಲ. ಅವರನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳದೆ ಅವರು ಹೀಗೆ ಅವರು ಹಾಗೆ ಅನ್ಕೊಂಡ್ರೆ ಒಂದೊಂದ್ಸಲ ಸತ್ಯ ತಲೆತಗ್ಗಿಸೋ ಹಾಗೆ ಮಾಡಬಹುದು...