Sunday, May 12, 2019

ಈಶ್ವರಿ‌ ವಿಶ್ವವಿದ್ಯಾ'ಲಯ'..

ನಿಮಗೆ ನೆನಪಿರಬಹುದು , ನಾನು ಇದೇ ಪೋಸ್ಟ್ ನ್ನು ಐದು ಸಾವಿರ ವರ್ಷಗಳ ಹಿಂದೆ ಇದೇ ತಾರೀಖಿನಂದು ಹಾಕಿದ್ದೆ. ನೀವು ಓದಿದ್ದಿರಿ. ಆಗಲೂ ನಿಮ್ಮ ಹತ್ತಿರ ಇದೇ ಮೊಬೈಲ್ ಇತ್ತು. ಇದೇ ಬಣ್ಣದ ಇದೇ ಬಟ್ಟೆ ಹಾಕಿದ್ದಿರಿ. ನಾನು ಈ ಪೋಸ್ಟ್ ಹಾಕುವ ಹಿಂದನ ದಿನ, ಇದೇ ರಮ್ಯಾ ಮತ್ತು ಭಗವಾನ್ ಇವೇ ಹೇಳಿಕೆ ನೀಡಿ ಮೊಟ್ಟೆಯೇಟು ತಿಂದಿದ್ದರು, ಐದು ಸಾವಿರ ವರ್ಷ ಗಳ ಹಿಂದೆ. ಮೋದಿ ಆಗಲೂ ಪ್ರಧಾನಿಯಾಗಿದ್ದರು.
ನನಗೆ ತಲೆ ಹಾಳಾಗಿರಬೇಕು, ಅಂತ ಯೋಚನೆ ಮಾಡಬೇಡಿ.  ಇಷ್ಷಕ್ಕೇ ಮುಗಿಯಲಿಲ್ಲ. ಅದರ ಹಿಂದನ ಐದು ಸಾವಿರ ವರ್ಷಗಳ ಹಿಂದೆಯೂ ಸೇಮ್ ಹೀಗೇ ಆಗಿತ್ತು. ಮತ್ತು ಅದರ ಹಿಂದಿನ ಐದು ಸಾವಿರ ವರ್ಷಗಳ ಹಿಂದೆಯೂ. .. ಹೀಗೆ ಪ್ರತೀ ಐದು ಸಾವಿರ ವರ್ಷಗಳಿಗೊಮ್ಮೆ ಇವೇ ಸೀನ್ ರಿಪೀಟ್ ಆಗಿವೆ. ನೂರಾರು ಅಲ್ಲ ಸಾವಿರಾರು ಬಾರಿ. ಈ ಜಗತ್ತು ಒಂದು ಸಿನಿಮಾದಂತೆ. ದೇವರು ನೋಡುವ ಸಿನಿಮಾ. ಆತ ಐದು ಸಾವಿರ ವರ್ಷಕ್ಕೊಮ್ಮೆ ಸೀಡಿ ಬದಲಾಯಿಸಿ , ಅದೇ ಸಿನಿಮಾ ಮತ್ತೆ ಮತ್ತೆ ನೋಡುತ್ತಾನೆ.


ಇದೆಲ್ಲ ನಾನು ಹೇಳಿದ್ದಲ್ಲ. ಇದನ್ನು ಹೇಳುತ್ತಿರುವುದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ.  ಮತ್ತು ಜಗತ್ತಿನಲ್ಲಿ ಇದನ್ನು ನಂಬುವ ಕನಿಷ್ಠ  ಹನ್ನೆರಡು ಲಕ್ಷ ಜನ ಇದ್ದಾರೆ.  2008 ರಲ್ಲೇ ಇವರ ಸಂಖ್ಯೆ 9 ಲಕ್ಷ ಇತ್ತು. 100 ದೇಶಗಳಲ್ಲಿ 8500 ಸಾವಿರ ಸೆಂಟರ್ ಗಳಿದ್ದವು.
ಸರಿ.  ಇಷ್ಟೇ ಆದರೆ ಏನು ತೊಂದರೆ ?  ಐದು ಸಾವಿರ ವರ್ಷಗಳಿಗೊಮ್ಮೆ ಜಗತ್ತು ಅದೇ ಅದೇ ರಿಪೀಟ್ ಮಾಡಿಕೊಳ್ಳುತ್ತದೆ ಅಂದುಕೊಳ್ಳೋಣ , ಮೂರ್ಖರು ಅಂತ ಸುಮ್ಮನಿರಬಹುದಿತ್ತಲ್ಲ.
ಇಲ್ಲ.  ಇಷ್ಟು ಸುಲಭವಿಲ್ಲ . ನನ್ನ ದೊಡ್ಡಪ್ಪ ತೀರಿಕೊಂಡಾಗ, ಡೊಡ್ಡಮ್ಮನನ್ಧು ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದವು. ಆಗ ಈ ಬ್ರಹ್ಮ ಕುಮಾರಿಗಳಿಗೆ ಎಲ್ಲಿಂದ ವಾಸನೆ ಬಂತೋ ಗೊತ್ತಿಲ್ಲ. ದೊಡ್ಡಮ್ಮ ನಿಗೆ ಈಶ್ವರೀ ಸೇರುವಂತೆ ಗಂಟು ಬಿದ್ದರು. ಆಗ ಇದೇನಂತ ನೋಡೋಣ ಅಂತ ನಾನು ಈಶ್ವರೀಗೆ ಒಂದು ವಾರ ಹೋದೆ. ಕರ್ಮ ಕರ್ಮ. ರಾಮ ಬೇರೆ , ರಾಜಾ ರಾಮ ಬೇರೆ ಅಂತೆಲ್ಲಾ ಏನೇನೋ ಕೊರೆದರು. ಹೇಗೆ ? ಅಂದೆ . ಗಾಂಧಿ ಬೇರೆ . ಮಹಾತ್ಮ ಗಾಂಧಿ ಬೇರೆ ಅಂದರು.  ಗೊತ್ತಾಗಲಿಲ್ಲ. ವಾಪಸ್ ಬಂದೆ. ಆಗ ನನ್ನ ಸಂಬಂಧಿಯೊಬ್ಬರು ಅದೇ ಕ್ಲಾಸ್ ನಲ್ಲಿದ್ದವರು , ನನ್ನನ್ನು ತಮ್ಮ ಮನೆಗೇ ಎಳೆದೊಯ್ದರು. ಆಕೆಯ ಒಬ್ಬಳೇ ಮಗಳು, ಇಂಜಿನಿಯರ್ ಅಮೇರಿಕಾದ ಹುಡುಗನೊಂದಿಗೆ ಮದುವೆ ಫಿಕ್ಸ್ ಆದವಳು , ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದು ಸತ್ತು ಹೋಗಿದ್ದಳು. ಈ ತಾಯಿ ಒಂದು ವಾರ ನೀರನ್ನೂ ಸೇವಿಸದೇ ಅತ್ತಿದ್ದರು. ಆಗ ಯಾರೋ ಅವರನ್ನು ಈಶ್ವರೀಗೆ ಸೇರಿಸಿದ ನಂತರವೇ ಅವರಿಗೆ ಸಮಾಧಾನ ಆಗಿದ್ದು. ಒಳ್ಳಯದೇ ಆಯಿತು ಅಂತೀರಾ ?  ಮುಂದೆ ಓದಿ. 
ಆಕೆಗೆ ಸಮಾಧಾನ ಆಗಲು ಕಾರಣವೇನೆಂದರೆ , ಇದೇ ಮಗ ನಿಮ್ಮ ಹೊಟ್ಟೆಯಲ್ಲಿ, ಐದು ಸಾವಿರ ವರ್ಷಗಳ ಹಿಂದೆಯೂ ಹುಟ್ಟಿದ್ದ , ಐದು ಸಾವಿರ ವರ್ಷಗಳ ನಂತರವೂ ಮತ್ತೆ ಹುಟ್ಟುತ್ತಾನೆ , ಅಂತ ಅವರು ನಂಬಿಸಿದ್ದು.
ಈ ತಾಯಿ ಈಗ ಈಶ್ವರೀಯ ಬಿಟ್ಟು ಬೇರೇನೂ ಮಾಡುವುದಿಲ್ಲ. ಈಶ್ವರೀಗೆ ಹಲವಾರು ಲಕ್ಷ ರೂಪಾಯಿ ದಾನ ಕೊಟ್ಟಿದ್ದಾರೆ. ಯಾರ ಬಳಿಯೂ ಮಾತನಾಡುವುದಿಲ್ಲ , ಯಾರ ಮನೆಗೂ ಹೋಗುವುದಿಲ್ಲ. ಸುಳ್ಳು ಕೂಡ ಹೇಳುವುದಿಲ್ಲ . ಅಂಥವರು ನನ್ನನ್ನು ದೇವರ ಮನೆಯಲ್ಲಿ ಕೂಡಿಸಿ ಧ್ಯಾನ ಮಾಡಲು ಹಚ್ಚಿದರು. ಸುಮಾರು ಅರ್ಧ ಗಂಟೆಯ ನಂತರ - ನೋಡು ಕಾಣುತ್ತಾ ? ಅಂತ ಕೇಳಿದರು. ನನಗೇನೂ ಕಾಣಲಿಲ್ಲ. ಏನು ? ಅಂದೆ . "ನೋಡು ಈ ಕೋಣೆಯ ತುಂಬಾ ಹತ್ತಿಯ ಉರುಳೆಗಳಂಥ , ಪ್ರಕಾಶಮಾನವಾದ ಮೋಡಗಳು ಬಂದಿವೆ , ಕಾಣುತ್ತಾ ? "
ಇಲ್ಲ. ನನಗೇನೂ ಕಾಣಲಿಲ್ಲ. ಆಕೆಯೇ ಹೇಳಿದರು -  ನನಗೂ ಮೊದ ಮೊದಲು ಕಾಣುತ್ತರಲಿಲ್ಲ. ನೀನು ಹದಿನೈದು ದಿನ ಬಾ, ಕಾಣುತ್ತದೆ, ಅಂತ. ನಾವು ಮೌಂಟ್ ಅಬುಗೆ ಹೋದಾಗ, ಅಲ್ಲಿ ದೊಡ್ಡ ಸಭಾಂಗಣ ಇದೆ. ಲಕ್ಷಾಂತರ ಜನ ಕೂಡುವಷ್ಟು. ಬಾಬಾ ಭಾಷಣ ಶುರು ಮಾಡಿದ ತಕ್ಷಣ, ಪ್ರಕಾಶ ಮಾನವಾದ ಹತ್ತಿಯಂಥ ಮೋಡಗಳು ಇಡೀ ಸಭಾಂಗಣ ತುಂಬುತ್ತವೆ. ಬಾಬಾ ಮುಖದಿಂದ ಬಂದ ತೇಜ ಕಣ್ಣು ಕುಕ್ಕುವಷ್ಟಿರುತ್ತದೆ , ಮಗಳೇ. ನಿನಗೆ ಸುಳ್ಳು ಹೇಳುವ ಯಾವುದೇ ಅಗತ್ಯ ನನಗಿಲ್ಲ " ಅಂದರು.  ಅದು ನಿಜವೂ ಆಗಿತ್ತು. ಮತ್ತೆ ಆಕೆ ಮಾನಸಿಕ ವಾಗಿ ಅತ್ಯಂತ ಸ್ವಸ್ಥೆ ಕೂಡಾ.
ಇವೆಲ್ಲ ಕೇಳಿ, ಹೌದಾ , ಈ ತರಹದ ಎಕ್ಸಪೀರಿಯನ್ಫ್ ಕೇವಲ ಒಂದೇ ಒಂದು ಸಲ ಸಿಕ್ಕರೂ ಜೀವನ ಧನ್ಯ ಅಂತ ಮತ್ತೆ ಈಶ್ವರೀಗೆ ಜಾಯಿನ್ ಆದೆ. ಅದು ಬಿಟ್ಟು ಇವರ ಮನೆಯಲ್ಲಿ ನಿತ್ಯ ಸಂಜೆ ಧ್ಯಾನ ಬೇರೆ. ಮೂರು ತಿಂಗಳಲ್ಲಿ ನಾನು ಕೇಳಿದ್ದು, ತಿಳಿದಿದ್ದು ಇಲ್ಲಿದೆ
ಈಶ್ವರೀಯ ಸ್ಥಾಪನೆ ಮಾಡಿದ್ದು ದಾದಾ ಲೇಖರಾಜ ಕ್ರಿಪಲಾನಿ. ಅಂತ ಒಬ್ಬ ಶ್ರೀಮಂತ ಸಿಂಧಿ ವಜ್ರದ ವ್ಯಾಪಾರಿ. 1936  ಹೈದರಾಬಾದ್ ನಲ್ಲಿ.  ಎರಡೇ ವರ್ಷ ಗಳಲ್ಲಿ ಇವರನ್ನು ಹಿಂದೂ ವಿರೋಧಿ ಅಂತ ಅವರ ಗುಂಪಿನವರೇ ಓಡಿಸಿದರು. ಇವರು ಹೋಗಿದ್ದು ಕರಾಚಿಗೆ. ಕೊನೆಗೆ ಮೌಂಟ್ ಅಬುಗೆ ಬಂದರು.  ದಾದಾ ಲೇಖರಾಜ ತನ್ನನ್ನು ತಾನೇ ಪ್ರಜಾಪಿತ ಬ್ರಹ್ಮ ಅಂತ ಕರೆದುಕೊಂಡರು. 1969 ರಲ್ಲಿ ವೀರೇಂದ್ರ ದೀಕ್ಷಿತ ಅನ್ನುವ ಇನ್ನೊಬ್ಬ ಇವರ ಆಶ್ರಮ ಸೇರಿದ. ಇವರ ಮುರಳಿ ಅಂತ ಡೇಲಿ ಬುಲೆಟಿನ್ ಸ್ಟಡಿ ಮಾಡಿ ತನ್ನನ್ಧು ತಾನೇ ಶಿವಾ ಬಾಬಾ ಅಥವಾ ಈಶ್ವರ ಅಂತ ಕರೆದುಕೊಂಡ.
ಇವರ ಸಿದ್ಧಾಂತ ಗಳು ನೇರವಾಗಿ ಹುಚ್ಚಾಸ್ಪತ್ರೆಯಿಂದ ಬಂದ ತರ ಇವೆ.
ಪ್ರತೀ ಐದು ಸಾವಿರ ವರ್ಷಗಳಿಗೊಮ್ಮೆ ಪ್ರಳಯ ಆಗುತ್ತದೆ.
ಈಗ ಐದು ಸಾವಿರ ವರ್ಷ ಮುಗಿದಿದೆ , ಆದುದರಿಂದ ಈಗ ಪ್ರಳಯ ನಿಶ್ಚಿತ.
ಪ್ರಳಯ ಮುಗಿದಾಗ, ಬ್ರಹ್ಮ ಕುಮಾರಿಯರಾದ ಹದಿನಾರು ಲಕ್ಷ ಜನ ಮತ್ತು ಅವರಿಗೆ ಸೇವಕರು ಅಂತ 32 ಲಕ್ಷ ಜನ ಮಾತ್ರ ಬದುಕಿರುತ್ತಾರೆ.
ಆಗ ಸತ್ಯಯುಗ. ಯಾವುದೇ ರೋಗ ರುಜಿನ , ಇರುವುದಿಲ್ಲ . ಸೆಕ್ಸ್ ಇರುವುದಿಲ್ಲ. ಒಂದು ಸಾವಿರ ವರ್ಷ ಸಾವು ಇರುವುದಿಲ್ಲ. ಈಶ್ವರೀಗೆ ಸೇರಿದವರೆಲ್ಲ ದೇವತೆಗಳಾಗುತ್ತಾರೆ. ಅವರಿಗೆ ಈಗಾಗಲೇ ತಲೆಯ ಮೇಲೆ ಕಿರೀಟ ಬೆಳೆಯಲು ಆರಂಭವಾಗಿದೆ. ಅವರು ಗಾಳಿಯಲ್ಲಿ ಹಾರಬಲ್ಲರು. ಈಗಿನ ಯಾವುದೇ ಸಾಧನ ಅಂದರೆ ಕಾಗದ ಪೆನ್ನು ಕಂಪ್ಯೂಟರ್ , ಸಿಮೆಂಟ್, ಕಾರ್ ಅಲ್ಲಿ ಇರುವುದಿಲ್ಲ. ಮನೆ ಗಳು ಬಂಗಾರದ್ದಾಗಿರುತ್ತವೆ. ಅಂದರೆ ಇದೇ ಭೂಮಿಯೇ ಸ್ವರ್ಗವಾಗಿರುತ್ತದೆ.
ಆಗ ಶ್ರೀ ಕೃಷ್ಣ ಬಂದು ಭಗವದ್ಖೀತೆ ಹೇಳುತ್ತಾನೆ. ಕೃಷ್ಣ ಭಗವದ್ಗೀತೆ ಮಹಾಭಾರತ ಕಾಲದಲ್ಲಿ ಹೇಳಿದ್ದು ಅಲ್ಲ.  ಯಾಕೆಂದರೆ ಗೀತೆ ಹೇಳಿದ ನಂತರ ಧರ್ಮ ಸಂಸ್ಥಾಪನೆ ಆಗಿಲ್ಲ . ಹಾಗಾಗಿ ಅದು ಸುಳ್ಳು. ಈಗ ಗೀತೆ ಹೇಳಿದ ನಂತರ ಒಂದು ಸಾವಿರ  ವರ್ಷ ಧರ್ಮ ಇರುತ್ತದೆ. ಹಾಗಾಗಿ ನಾವು ಹೇಳುವುದು ಸರಿ. ಇತ್ಯಾದಿ.
ಈತರದ ಗ್ರೂಪ್ ಗಳಿಗೆ ಕಲ್ಟ್ ಅಂತ ಕರೆಯುತ್ತಾರೆ. ಪ್ರಳಯ ಆಗುತ್ತದೆ ಅಂತ ಒಂದು ಕಲ್ಟಗೆ ಸೇರಿದ ನೂರು ಜನ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡ ದಾಖಲೆಯೂ ಇದೆ.
ಇದೇ ಈಶ್ವರೀ 1976 ರಲ್ಲಿ ಪ್ರಳಯ ಆಗುತ್ತದೆ ಅಂತ ಹೆದರಿಸಿತ್ತು. ನಂತರ ಪ್ರತೀ ಸಲ ಪ್ರಳಯ ಮುಂದೆ ಹಾಕಿದರು. ಪ್ರಳಯ ಆಗುತ್ತದೆ ಅಂತ ಹೆದರಿಸಿ ಜನರ ಬಳಿ ದುಡ್ಡು ಕೀಳುವುದು. ತಮ್ಮ ಸಂಘಟನೆ ತೊರೆದು ಹೋದರೆ ದೇವರು ಶಿಕ್ಷೆ ಕೊಡುತ್ತಾನೆ , ಐದನೇ ಮಹಡಿಯಿಂದ ದೂಡುತ್ತಾನೆ ಅಂತ ಚಿತ್ರ ಬರೆದು ತೋರಿಸುವುದು. ತಮ್ಮ ಸಂಘಟನೆಯಲ್ಲೇ ಇದ್ದರೆ ದೈವತ್ವ ಬರುತ್ತದೆ ಅಂತ ಆಮಿಷ. ಈಶ್ವರೀಗೆ ಸೇರಿದ ಎಲ್ಲರೂ ದೇವದೂತರು , ಅವರಿಗೆ ದೇವರ ಜೊತೆಯಲ್ಲಿ ಸಂಭಾಷಣೆ ಮಾಡಲು ಸಾಧ್ಯ ಅಂತ ಹೇಳುವುದು
ಜಗಮೋಹನ್ ಗಾರ್ಗ್ ಎಂಬಾತ , ಈಶ್ವರೀಯ ವಿಶ್ವ ವಿದ್ಯಾಲಯದ " ಪೀಸ್ ಆಫ್ ಮೈಂಡ್ " ಎನ್ನುವ ಟೀವಿ ಚ್ಯಾನಲ್ಲಿನ ಮಾಲೀಕ. ಈ ಸಂಘಟನೆಯ ಪ್ರಮುಖ ಸ್ಟ್ರಾಟಜಿಸ್ಟ್ ಕೂಡ . ಈತ 5600 ಕೋಟಿ ರೂಪಾಯಿಗಳ ಫ್ರಾಡ್ ಮಾಡಿ ಲಕ್ಷಾಂತರ ಜನರನ್ನು ವಂಚಿಸಿದ್ದಾನೆ.
ಗಂಡನನ್ನೇ ಅಣ್ಣ ಅಂತ ಕರೆಯಬೇಕು. ಗಂಡು ಹೆಣ್ಣು ಕೂಡಬಾರದು. ತಾವೇ ಸ್ವತಃ ಅಡಿಗೆ ಮಾಡಿ ಉಣ್ಣಬೇಕು ಅಥವಾ ಬೇರೆ ಬ್ರಹ್ಮ ಕುಮಾರಿಯ ಮನೆಯಲ್ಲಿ ಮಾತ್ರ ಉಣ್ಣಬೇಕು , ಇತ್ಯಾದಿ ಹುಚ್ಚಾಪಟ್ಟೆ ರೂಲ್ಸ್ ಇರುವ ಈ ಸಂಸ್ಥೆಗೆ ಲಕ್ಷಾಂತರ ಮೆಂಬರ್ಸ್ ಇರುವುದು , ಜಗತ್ತಿನಲ್ಲಿ ದೇವರ ಹೆಸರಿನಿಂದ ಏನು ಬೇಕಾದರೂ ಮಾಡಬಹುದು ಅಂತ ತೋರಿಸುತ್ತದೆ.
ಇವರು ಕೆಲವು ಒಳ್ಳೆಯ ಕೆಲಸಗಳನ್ಧೂ ಮಾಡಿದ್ದಾರೆ. ಇಡೀ ಮೌಂಟ್ ಅಬು ಸೋಲಾರ್ ಎನರ್ಜಿಯಿಂದ ನಡೆಯುತ್ತದೆ. ವಿಶ್ವದ ಅತ್ಯಂತ ದೊಡ್ಡ ಸೋಲಾರ ಕುಕ್ಕರ್ ತಯಾರಿದ್ದಾರೆ. ಮೆಡಿಕಲ್ ರೀಸರ್ಚ್ ಸೆಂಟರ್ ಸ್ಥಾಪಿಸಿದ್ದಾರೆ. ರೈತರಿಗೆ ಸ್ವಸಹಾಯ ಪದ್ಧತಿ ಕಲಿಸಿದ್ದಾರೆ. ಆದರೆ ಯಾವುದೇ ಇಂತಹ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುವುದು ಅವಗಳಿಗೆ ಬಂಡವಾಳ ಹರಿದು ಬರಲು ದಾರಿ. ಮೊದಲೇ ಹೇಳಿದಂತೆ , ಬಂದ ಹಣದ ಶೇಕಡ 10 ರಿಂದ ಕೆಲಸ ಮಾಡುವುದು. ಉಳಿದ ಹಣ ಕಿಸೆಯಲ್ಲಿ.
ಇದಕ್ಕಿಂತ ಮಜಾ ಅಂದರೆ , ಪ್ರಳಯ ಈಗ ಆಗುತ್ತದೆ . ಆಗ ಆಗುತ್ತದೆ ಅಂತ ಹೇಳುವ ಇವರಿಗೇಕೆ ಮೆಡಿಕಲ್ ರೀಸರ್ಚ್ , ಯಾಕೆ ಸೋಲಾರ್ ಎನರ್ಜಿ ?
ಈ ತರ ಕಲ್ಟಗಳು ಸಮಾಜಕ್ಕೆ ಮಾರಕ. ಹಿಂದೂ  ಧರ್ಮದ  ಹೆಸರಿನಲ್ಲಿ  ಇಂಥವು ಬೇಡವೇ  ಬೇಡ.
(* ಲೇಖನದ ಬಗ್ಗೆ ಯಾವುದೇ ದೂರುಗಳಿದ್ದರೆ ಕೆಳಗೆ ಕಾಮೆಂಟ್ ಮಾಡಿ. ನಿಮ್ಮ ದೂರು ನಿಜವೆನಿಸಿದರೆ ಲೇಖನವನ್ನು ಇಲ್ಲಿಂದ ತೆಗೆದುಹಾಕಲಾಗುತ್ತದೆ.)

ನಿಂತ ಹೆಣಗಳು

ಜನರ ಗುಂಪಿನ ನಡುವೆ ಸೆಣಸುತ್ತಾ ಕ್ಯಾಮೆರಾವನ್ನು ಮೇಲೆ ಹಿಡಿದು ಆ ದೃಶ್ಯವನ್ನು ಸೆರೆಹಿಡಿಯುತ್ತಿದ್ದೆ.

ಯಾರೋ ಒಬ್ಬ ಹಿಂದಿನಿಂದ ಭುಜದ ಮೇಲೆ ಕೈಹಾಕಿ ನನ್ನ ಏಕಾಗ್ರತೆಗೆ ಭಂಗ ತಂದ.
ಸಿಟ್ಟಿನಿಂದ ಹಿಂದೆ ತಿರುಗಿದೆ.ನನ್ನ ಉಗ್ರ ಕಣ್ಣುಗಳನ್ನು ಎರಡು ಪ್ರಶಾಂತ ಕಣ್ಣುಗಳು ಸಂಧಿಸಿದುವು.

"ಏನಿದು ಗುಂಪು? " ಅಂದ.
ಕಣ್ಣು ಕಾಣ್ಸಲ್ವೇನಯ್ಯಾ ಅನ್ನುವಷ್ಟು ಸಿಟ್ಟು ಬಂತು. ತಡೆದುಕೊಂಡೆ.
'ಸ್ಪಾಟ್ ಡೆತ್ತು. ಹೆಣ ಬಿದ್ದಿದೆ."
ಆತ ಕತ್ತನ್ನು ಮುಂದೆ ಚಾಚಿ ಅವಲೋಕಿಸಿದ.

ನೀರು ಕಾಣದೇ ಜಿಡ್ಡುಗಟ್ಟಿದ ಗಡ್ಡ ಕೊರಳನ್ನು ಮುಚ್ಚಿತ್ತು. ಕೋಟು ಎನಿಸಿಕೊಳ್ಳಲೂ ಲಾಯಕ್ಕಿಲ್ಲದ ಮಾಸಲು ಬಟ್ಟೆಯ ಮೇಲೆ ಎಣಿಸಿದಷ್ಟು ಪ್ಯಾಚುಗಳು.
"ಇಷ್ಟೊತ್ತಿನವರೆಗೂ ಗುಟುಕು ಜೀವ ಇತ್ತು,ಇದೀಗ ಕೈಕಾಲುಗಳು ನಿಂತುಹೋದವು " ಅಂದೆ.
ಆತ ಕೆಳಗೆ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು  ಎದುರು ದಿಕ್ಕಿಗೆ ತಿರುಗಿ ಒಂದೆರಡು ಕ್ಷಣ ಕಣ್ಣುಮುಚ್ಚಿ ತೆರೆದು ಹೇಳಿದ - "ಹೆಣ ಬಿದ್ದಿಲ್ಲ,ನಿಂತಿದೆ "

ಇದ್ಯಾವುದೋ ವಿಲಕ್ಷಣ ಗಿರಾಕಿಯ  ಕೈಗೆ ಸಿಕ್ಕಿಬಿದ್ದೆನಲ್ಲ ಅನ್ನಿಸ್ತು..

ನನ್ನ ಪ್ರಶ್ನಾರ್ಥಕ ಕಣ್ಣುಗಳನ್ನು ನೋಡಿ ಆತ ಪ್ರಶಾಂತ ಚಿತ್ತದಿಂದ ಹೇಳಿದ. -" ಹೌದು. ಹೆಣ ಬಿದ್ದಿಲ್ಲ, ನಿಂತಿದೆ ..ಮನುಷ್ಯತ್ವದ ಹೆಣ ನಿಂತಿದೆ..ನಿಮ್ಮೆಲ್ಲರ ಕಾಲುಗಳ ಮೇಲೆ "

ನನಗೆ ಕಾದ ಚೂರಿ ಕರುಳು ಹೊಕ್ಕಂತಾಯಿತು.
ದೂರದಲ್ಲಿ ಆಂಬುಲೆನ್ಸ್ ಬರುವ ಸದ್ದು ಕೇಳಿಸುತ್ತಿದ್ದಂತೆ ಹೆಣಗಳೆಲ್ಲ ಚದುರಿದೆವು.

Friday, May 3, 2019

'ಎವರೆಸ್ಟ್ ಪರ್ವತವನ್ನು ಹತ್ತುತ್ತೀಯಾ ಮಗೂ'?

ಮೇ 29, 1953....
ಬಹಳ ಮಹತ್ತರ ದಿನ.
ಏಕೆ ಗೊತ್ತಾ?
ಅಂದು ಎವರೆಸ್ಟ್ ಪರ್ವತವನ್ನು ತೇನ್ ಸಿಂಗ್ ಮತ್ತು ಹಿಲರಿ ಹತ್ತಿದ್ದರು. ಆಗ ತೇನ್ ಸಿಂಗ್ ಗೆ ಸುಮಾರು ನಲವತ್ತು ವರ್ಷ ವಯಸ್ಸು. ಅವರನ್ನು ಸ್ವಾಗತಿಸಲು, ಅಭಿನಂದಿಸಲು ಬಂದಿದ್ದ ಒಬ್ಬ ಪತ್ರಿಕಾ ವರದಿಗಾರರು ತೇನ್‌ಸಿಂಗ್ ಸಿಂಗ್ ನನ್ನು ಪ್ರಶ್ನಿಸಿದರು, 'ನಲವತ್ತರ ವಯಸ್ಸಿನಲ್ಲಿ ಇಂತಹ ಮಹತ್ ಸಾಧನೆಯನ್ನು ಮಾಡಿ ನಿಂತಿರುವ ನಿಮಗೆ ಹೇಗನಿಸುತ್ತದೆ'? ಮತ್ತು 'ಪ್ರೇರಣೆ ಏನು'? ಎಂದು.
ತೇನ್ ಸಿಂಗರು 'ನಾನು ಎವರೆಸ್ಟ್ ಪರ್ವತವನ್ನು ಇಂದು ಹತ್ತಿದೆ ಎಂದು ಯಾರು ಹೇಳಿದರು? ನಾನು ಹತ್ತಿದ್ದು ನನ್ನ ಹತ್ತನೆಯ ವಯಸ್ಸಿನಲ್ಲಿ' ಎಂದರು. ಆಶ್ಚರ್ಯಗೊಂಡ ಪತ್ರಿಕೆಯವರ ಮುಖ ನೋಡಿ ತೇನ್ ಸಿಂಗ್ ರೇ ಮುಂದುವರೆಸಿದರು.


'ನನ್ನದು ಶೆರ್ಪ ಜನಾಂಗಕ್ಕೆ ಸೇರಿದ ಬಡ ಕುಟುಂಬ. ನಮ್ಮ ಜೀವನಕ್ಕೆ ಆಧಾರ ಇಪ್ಪತ್ತೈದು ಮೇಕೆಗಳು. ಅವುಗಳನ್ನು ಮೇಯಿಸಿಕೊಂಡು ಬರಲು ನಮ್ಮ ತಾಯಿ ಪ್ರತಿದಿನ ನನ್ನನ್ನು ಪರ್ವತದ ತಪ್ಪಲಿಗೆ ತಂದು ಬಿಡುತ್ತಿದ್ದರು. ಊಟದ ಬುತ್ತಿ, ಕುಡಿಕೆಯಲ್ಲಿ ನೀರು ಕೊಟ್ಟು 'ಇಪ್ಪತ್ತೈದು ಮೇಕೆಗಳನ್ನು ಜಾಗರೂಕತೆಯಿಂದ ಮೇಯಿಸಿಕೊಂಡು ಬಾ' ಎನ್ನುತ್ತಿದ್ದರು. ಹೊರಡುವ ಮುಂಚೆ ಪರ್ವತ ಶ್ರೇಣಿಗಳತ್ತ ಕೈ ತೋರಿಸಿ 'ಮಗು! ಅಲ್ಲಿ ಕಾಣುತ್ತಿರುವ ಎವರೆಸ್ಟ್ ಪರ್ವತವನ್ನು ಇದುವರೆಗೆ ಯಾರೂ ಹತ್ತಿಲ್ಲ! ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿ ಕೆನ್ನೆ ಸವರಿ ಹೋಗುತ್ತಿದ್ದರು. ಇಡೀ ದಿನ ಮೇಕೆಗಳನ್ನು ಮೇಯಿಸುತ್ತಾ ಒಮ್ಮೆ ಮೇಕೆಗಳತ್ತ ಮತ್ತೊಮ್ಮೆ ಎವರೆಸ್ಟ್ ಪರ್ವತದತ್ತ ನೋಡುತ್ತಾ, ಆ ಪರ್ವತವನ್ನು ಹತ್ತುವ ಹಗಲುಗನಸು ಕಾಣುತ್ತಾ ಸುತ್ತುತ್ತಿದ್ದೆ. ಅಂದು ಮಾನಸಿಕವಾಗಿ ಹತ್ತಲು ಪ್ರಾರಂಭಿಸಿದೆ. ಇಂದು ದೈಹಿಕವಾಗಿಯೂ ಹತ್ತಿದ್ದೇನೆ.


ಈ ಸಾಹಸಕ್ಕೆ ತಾಯಿಯ 'ಯಾರೂ ಎವರೆಸ್ಟ್ ಪರ್ವತವನ್ನು ಹತ್ತಿಲ್ಲ, ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿದ ಮಾತೇ ಸ್ಪೂರ್ತಿ. ಅಬ್ಬಬ್ಬಾ! ಎಂತಹ ತಾಯಿ, ಎಂತಹ ಮಗ! ಮರವನ್ನು ಹತ್ತಬೇಡಾ, ಬಿದ್ದರೆ ಪೆಟ್ಟಾದೀತು ಎಂದು ಹೇಳುವ ವಿದ್ಯಾವಂತರಾದ ತಂದೆ-ತಾಯಿಯರು ನಾವೆಲ್ಲಿ? ಎವರೆಸ್ಟ್ ಪರ್ವತವನ್ನೇ ಹತ್ತು ಎಂದು ಹೇಳಿದ ಆ ಅವಿದ್ಯಾವಂತೆ ತಾಯಿ ಎಲ್ಲಿ? 'ನೀನು ದೊಡ್ಡ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು. ದೊಡ್ಡ ಸಂಬಳ ಪಡೆಯಬೇಕು, ದೊಡ್ಡ ಮನೆ ಕಟ್ಟಿಸಬೇಕು, ದೊಡ್ಡ ಕಾರ್ ತೆಗೆದುಕೊಳ್ಳಬೇಕು, ಶ್ರೀಮಂತ ಹೆಂಡತಿಯನ್ನು ಮದುವೆಯಾಗಬೇಕು, ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಇಡಬೇಕು' ಇದು ನಮ್ಮ ಬೋಧನೆ. ಎವರೆಸ್ಟ್ ಹತ್ತು ಎಂದು ಯಾವ ಹೆತ್ತವರೂ ಹೇಳುವುದಿಲ್ಲ. ಆ ಮಕ್ಕಳೂ ಏರುವುದಿಲ್ಲ. ಆ ಮಕ್ಕಳ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರುವುದೂ ಇಲ್ಲ! ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋಣ, ಒಳ್ಳೆಯ ಆಸ್ತಿ-ಪಾಸ್ತಿ ಕೂಡಿಡೋಣ. ಸಾಧ್ಯವಾದರೆ ಒಂದು ಮಹತ್ತರ ಸಾಧನೆಯನ್ನು ಮಾಡಲು ಸಲಹೆ ಕೊಡೋಣ. ಪ್ರೋತ್ಸಾಹಿಸೋಣ. (ಸಂಗ್ರಹ)