ಬಹಳ ಮಹತ್ತರ ದಿನ.
ಏಕೆ ಗೊತ್ತಾ?
ಅಂದು ಎವರೆಸ್ಟ್ ಪರ್ವತವನ್ನು ತೇನ್ ಸಿಂಗ್ ಮತ್ತು ಹಿಲರಿ ಹತ್ತಿದ್ದರು. ಆಗ ತೇನ್ ಸಿಂಗ್ ಗೆ ಸುಮಾರು ನಲವತ್ತು ವರ್ಷ ವಯಸ್ಸು. ಅವರನ್ನು ಸ್ವಾಗತಿಸಲು, ಅಭಿನಂದಿಸಲು ಬಂದಿದ್ದ ಒಬ್ಬ ಪತ್ರಿಕಾ ವರದಿಗಾರರು ತೇನ್‌ಸಿಂಗ್ ಸಿಂಗ್ ನನ್ನು ಪ್ರಶ್ನಿಸಿದರು, 'ನಲವತ್ತರ ವಯಸ್ಸಿನಲ್ಲಿ ಇಂತಹ ಮಹತ್ ಸಾಧನೆಯನ್ನು ಮಾಡಿ ನಿಂತಿರುವ ನಿಮಗೆ ಹೇಗನಿಸುತ್ತದೆ'? ಮತ್ತು 'ಪ್ರೇರಣೆ ಏನು'? ಎಂದು.
ತೇನ್ ಸಿಂಗರು 'ನಾನು ಎವರೆಸ್ಟ್ ಪರ್ವತವನ್ನು ಇಂದು ಹತ್ತಿದೆ ಎಂದು ಯಾರು ಹೇಳಿದರು? ನಾನು ಹತ್ತಿದ್ದು ನನ್ನ ಹತ್ತನೆಯ ವಯಸ್ಸಿನಲ್ಲಿ' ಎಂದರು. ಆಶ್ಚರ್ಯಗೊಂಡ ಪತ್ರಿಕೆಯವರ ಮುಖ ನೋಡಿ ತೇನ್ ಸಿಂಗ್ ರೇ ಮುಂದುವರೆಸಿದರು.
'ನನ್ನದು ಶೆರ್ಪ ಜನಾಂಗಕ್ಕೆ ಸೇರಿದ ಬಡ ಕುಟುಂಬ. ನಮ್ಮ ಜೀವನಕ್ಕೆ ಆಧಾರ ಇಪ್ಪತ್ತೈದು ಮೇಕೆಗಳು. ಅವುಗಳನ್ನು ಮೇಯಿಸಿಕೊಂಡು ಬರಲು ನಮ್ಮ ತಾಯಿ ಪ್ರತಿದಿನ ನನ್ನನ್ನು ಪರ್ವತದ ತಪ್ಪಲಿಗೆ ತಂದು ಬಿಡುತ್ತಿದ್ದರು. ಊಟದ ಬುತ್ತಿ, ಕುಡಿಕೆಯಲ್ಲಿ ನೀರು ಕೊಟ್ಟು 'ಇಪ್ಪತ್ತೈದು ಮೇಕೆಗಳನ್ನು ಜಾಗರೂಕತೆಯಿಂದ ಮೇಯಿಸಿಕೊಂಡು ಬಾ' ಎನ್ನುತ್ತಿದ್ದರು. ಹೊರಡುವ ಮುಂಚೆ ಪರ್ವತ ಶ್ರೇಣಿಗಳತ್ತ ಕೈ ತೋರಿಸಿ 'ಮಗು! ಅಲ್ಲಿ ಕಾಣುತ್ತಿರುವ ಎವರೆಸ್ಟ್ ಪರ್ವತವನ್ನು ಇದುವರೆಗೆ ಯಾರೂ ಹತ್ತಿಲ್ಲ! ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿ ಕೆನ್ನೆ ಸವರಿ ಹೋಗುತ್ತಿದ್ದರು. ಇಡೀ ದಿನ ಮೇಕೆಗಳನ್ನು ಮೇಯಿಸುತ್ತಾ ಒಮ್ಮೆ ಮೇಕೆಗಳತ್ತ ಮತ್ತೊಮ್ಮೆ ಎವರೆಸ್ಟ್ ಪರ್ವತದತ್ತ ನೋಡುತ್ತಾ, ಆ ಪರ್ವತವನ್ನು ಹತ್ತುವ ಹಗಲುಗನಸು ಕಾಣುತ್ತಾ ಸುತ್ತುತ್ತಿದ್ದೆ. ಅಂದು ಮಾನಸಿಕವಾಗಿ ಹತ್ತಲು ಪ್ರಾರಂಭಿಸಿದೆ. ಇಂದು ದೈಹಿಕವಾಗಿಯೂ ಹತ್ತಿದ್ದೇನೆ.
ಈ ಸಾಹಸಕ್ಕೆ ತಾಯಿಯ 'ಯಾರೂ ಎವರೆಸ್ಟ್ ಪರ್ವತವನ್ನು ಹತ್ತಿಲ್ಲ, ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿದ ಮಾತೇ ಸ್ಪೂರ್ತಿ. ಅಬ್ಬಬ್ಬಾ! ಎಂತಹ ತಾಯಿ, ಎಂತಹ ಮಗ! ಮರವನ್ನು ಹತ್ತಬೇಡಾ, ಬಿದ್ದರೆ ಪೆಟ್ಟಾದೀತು ಎಂದು ಹೇಳುವ ವಿದ್ಯಾವಂತರಾದ ತಂದೆ-ತಾಯಿಯರು ನಾವೆಲ್ಲಿ? ಎವರೆಸ್ಟ್ ಪರ್ವತವನ್ನೇ ಹತ್ತು ಎಂದು ಹೇಳಿದ ಆ ಅವಿದ್ಯಾವಂತೆ ತಾಯಿ ಎಲ್ಲಿ? 'ನೀನು ದೊಡ್ಡ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು. ದೊಡ್ಡ ಸಂಬಳ ಪಡೆಯಬೇಕು, ದೊಡ್ಡ ಮನೆ ಕಟ್ಟಿಸಬೇಕು, ದೊಡ್ಡ ಕಾರ್ ತೆಗೆದುಕೊಳ್ಳಬೇಕು, ಶ್ರೀಮಂತ ಹೆಂಡತಿಯನ್ನು ಮದುವೆಯಾಗಬೇಕು, ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಇಡಬೇಕು' ಇದು ನಮ್ಮ ಬೋಧನೆ. ಎವರೆಸ್ಟ್ ಹತ್ತು ಎಂದು ಯಾವ ಹೆತ್ತವರೂ ಹೇಳುವುದಿಲ್ಲ. ಆ ಮಕ್ಕಳೂ ಏರುವುದಿಲ್ಲ. ಆ ಮಕ್ಕಳ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರುವುದೂ ಇಲ್ಲ! ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋಣ, ಒಳ್ಳೆಯ ಆಸ್ತಿ-ಪಾಸ್ತಿ ಕೂಡಿಡೋಣ. ಸಾಧ್ಯವಾದರೆ ಒಂದು ಮಹತ್ತರ ಸಾಧನೆಯನ್ನು ಮಾಡಲು ಸಲಹೆ ಕೊಡೋಣ. ಪ್ರೋತ್ಸಾಹಿಸೋಣ. (ಸಂಗ್ರಹ)
No comments:
Post a Comment