Sunday, May 12, 2019

ನಿಂತ ಹೆಣಗಳು

ಜನರ ಗುಂಪಿನ ನಡುವೆ ಸೆಣಸುತ್ತಾ ಕ್ಯಾಮೆರಾವನ್ನು ಮೇಲೆ ಹಿಡಿದು ಆ ದೃಶ್ಯವನ್ನು ಸೆರೆಹಿಡಿಯುತ್ತಿದ್ದೆ.

ಯಾರೋ ಒಬ್ಬ ಹಿಂದಿನಿಂದ ಭುಜದ ಮೇಲೆ ಕೈಹಾಕಿ ನನ್ನ ಏಕಾಗ್ರತೆಗೆ ಭಂಗ ತಂದ.
ಸಿಟ್ಟಿನಿಂದ ಹಿಂದೆ ತಿರುಗಿದೆ.ನನ್ನ ಉಗ್ರ ಕಣ್ಣುಗಳನ್ನು ಎರಡು ಪ್ರಶಾಂತ ಕಣ್ಣುಗಳು ಸಂಧಿಸಿದುವು.

"ಏನಿದು ಗುಂಪು? " ಅಂದ.
ಕಣ್ಣು ಕಾಣ್ಸಲ್ವೇನಯ್ಯಾ ಅನ್ನುವಷ್ಟು ಸಿಟ್ಟು ಬಂತು. ತಡೆದುಕೊಂಡೆ.
'ಸ್ಪಾಟ್ ಡೆತ್ತು. ಹೆಣ ಬಿದ್ದಿದೆ."
ಆತ ಕತ್ತನ್ನು ಮುಂದೆ ಚಾಚಿ ಅವಲೋಕಿಸಿದ.

ನೀರು ಕಾಣದೇ ಜಿಡ್ಡುಗಟ್ಟಿದ ಗಡ್ಡ ಕೊರಳನ್ನು ಮುಚ್ಚಿತ್ತು. ಕೋಟು ಎನಿಸಿಕೊಳ್ಳಲೂ ಲಾಯಕ್ಕಿಲ್ಲದ ಮಾಸಲು ಬಟ್ಟೆಯ ಮೇಲೆ ಎಣಿಸಿದಷ್ಟು ಪ್ಯಾಚುಗಳು.
"ಇಷ್ಟೊತ್ತಿನವರೆಗೂ ಗುಟುಕು ಜೀವ ಇತ್ತು,ಇದೀಗ ಕೈಕಾಲುಗಳು ನಿಂತುಹೋದವು " ಅಂದೆ.
ಆತ ಕೆಳಗೆ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು  ಎದುರು ದಿಕ್ಕಿಗೆ ತಿರುಗಿ ಒಂದೆರಡು ಕ್ಷಣ ಕಣ್ಣುಮುಚ್ಚಿ ತೆರೆದು ಹೇಳಿದ - "ಹೆಣ ಬಿದ್ದಿಲ್ಲ,ನಿಂತಿದೆ "

ಇದ್ಯಾವುದೋ ವಿಲಕ್ಷಣ ಗಿರಾಕಿಯ  ಕೈಗೆ ಸಿಕ್ಕಿಬಿದ್ದೆನಲ್ಲ ಅನ್ನಿಸ್ತು..

ನನ್ನ ಪ್ರಶ್ನಾರ್ಥಕ ಕಣ್ಣುಗಳನ್ನು ನೋಡಿ ಆತ ಪ್ರಶಾಂತ ಚಿತ್ತದಿಂದ ಹೇಳಿದ. -" ಹೌದು. ಹೆಣ ಬಿದ್ದಿಲ್ಲ, ನಿಂತಿದೆ ..ಮನುಷ್ಯತ್ವದ ಹೆಣ ನಿಂತಿದೆ..ನಿಮ್ಮೆಲ್ಲರ ಕಾಲುಗಳ ಮೇಲೆ "

ನನಗೆ ಕಾದ ಚೂರಿ ಕರುಳು ಹೊಕ್ಕಂತಾಯಿತು.
ದೂರದಲ್ಲಿ ಆಂಬುಲೆನ್ಸ್ ಬರುವ ಸದ್ದು ಕೇಳಿಸುತ್ತಿದ್ದಂತೆ ಹೆಣಗಳೆಲ್ಲ ಚದುರಿದೆವು.

No comments: