ನಾಲ್ಕಾಣೆ ಪತ್ರ ತೆಗೆದುಕೊಂಡು ಒಂದು ಮೂಲೆಯಲ್ಲಿ ಕ್ಷೇಮ ಎಂದು ಬರೆದು ಮಧ್ಯದಲ್ಲಿ ಶ್ರೀ ಎಂಥಲೋ ಓಂ ಎಂಥಲೋ ಬರೆದು ಇನ್ನೊದು ಮೂಲೆಯಲ್ಲಿ ದಿನಾಂಕ ಬರೆದು ಪತ್ರ ಬರೆಯುತ್ತಿದ್ದ ರೀತಿ. ಎಂದೋ ಬರೆದ ಪತ್ರ ಇನ್ನೆಂದೋ ಬಂದು ಸೇರುತ್ತಿತ್ತು . ಒಮ್ಮೊಮ್ಮೆ ಕಳುಹಿಸಿದ ಪತ್ರಗಳು ಹಲವು ತಿಂಗಳ ನಂತರ ತಲುಪುತ್ತಿದ್ದವು. ಒಮ್ಮೆ ನಮ್ಮ ಮಾವನ ಮಗನ ಹೆಂಡತಿ ಸತ್ತಗ ಕಳುಹಿಸಿದ ಪತ್ರವನ್ನಿಡಿದು ಹೋದ ನನ್ನಪ್ಪನಿಗೆ ಶಾಕ್ ಕಾದಿತ್ತು ಅಲ್ಲಿ ಅವನಿಗೆ ಇನ್ನೊಂದು ಮದುವೆ ನೆಡೆಯುತ್ತಿತ್ತು.!! ಇಂಥಾ ಉದಾಹರಣೆಗಳು ಅದೆಷ್ಟೋ..
ಪತ್ರಗಳಷ್ಟೇ ಅಲ್ಲ, ಬರವಣಿಗೆಯೇ ಕಣ್ಮರೆಯಾಗುತ್ತಿದೆ. ಮೆಸೇಜ್ ಟೈಪ್ ಮಾಡುವ ಕಾಲವೂ ದೂರ ಸಾಗುತ್ತಿದೆ ಮುಂದೇನಿದ್ದರೂ 'ಇಮೋಜಿ'ಗಳ ಕಾಲ, ಹಾಯ್ ಹೇಳಲು ಬಾಯ್ ಹೇಳಲು, ಕೊನೆಗೆ ದುಖಃ ಆಗ್ತಿದೆ ಅಂತ ಹೇಳಲೂ ಇಮೋಜಿಯೇ ಬೇಕು ಅದಿರಲಿ ಇದರಬಗ್ಗೆ ಮುದೊಂದು ದಿನ ಮಾತಾಡುವೆ...
ನನ್ನ ಬರವಣಿಗೆಯ ಮೊದಲ ಹೆಜ್ಜೆ ಪ್ರಾರಂಭವಾಗಿದ್ದೇ ಹುಡುಗಿಗೆ ಪ್ರೇಮ ಪತ್ರಬರೆಯುವ ಮೂಲಕ !! ಒಂದು ಹುಡುಗಿಗೆ ನೀವು ಎಷ್ಟು ಪುಟ ಪತ್ರ ಬರೆಯಬಹುದು? ಐದು, ಹತ್ತು, ನೂರು ?? ನಾನು ಬರೊಬ್ಬರಿ ಇನ್ನೂರು ಪುಟಗಳ ಎಂಟು ನೊಟ್‍ಬುಕ್ ಬರೆದಿದ್ದೆ.... ಈಗಲೂ ಹಳೆಯ ಪತ್ರಗಳನ್ನು ಓದುತ್ತಿದ್ದರೆ ಕೆಲವೊಮ್ಮೆ ನಗು ಬರುತ್ತದೆ, ನಿಜವಾಗಿಯೂ ಇಷ್ಟೊಂದು ಬರೆದದ್ದು ನಾನೇನಾ ಎಂದೆನಿಸುತ್ತದೆ, ಲೆಕ್ಚರ್ ಒಂದು ಪ್ರೋಜೆಕ್ಟ್ ಕೊಟ್ಟರೆ ಸಬ್ಮಿಟ್ ಮಾಡುವ ಹಿಂದಿನ ದಿನ ಬರೆಯುವ ನಾನು ಅಷ್ಟೊಂದು ಹೇಗೆ ಬರೆದೆ ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆ !
ಬರೆಯಲು ಪೆನ್ನು ಪೇಪರ್ ಇದ್ದರೆ ಸಾಲದು ಸ್ಪೂರ್ತಿಯೂ ಇರಬೇಕು. ಆ ಸ್ಪೂರ್ತಿಯೇ ಪ್ರೀತಿಯಾಗಿದ್ದರೆ ಪೆನ್ನಿಗೆ ಕ್ಯಾಪ್ ಹಾಕುವ ಅವಶ್ಯಕತೆಯೇ ಇರುವುದಿಲ್ಲ. ನಾನು ಗಮನಿಸಿದಂತೆ ತುಂಬಾ ಜನ ಕವಿಗಳು ಪ್ರೀತಿಯಿಂದ ಸ್ಪೂರ್ತಿಯಾದವರೇ.. ಅದು ಯಾರಮೇಲಾದರೂ ಅಥವಾ ಯಾವುದರಮೇಲಾದರೂ ಸರಿ.. ವಿಷಯಾಂತರ ಮಾಡಿದ್ದಕ್ಕೆ ಕ್ಷಮೆ ಇರಲಿ...
ನೀವು ಸ್ವಲ್ಪ ಹಿಂದೆ ಹೋಗಿ ಯೋಚಿಸಿ ಹೇಳಿ ನೀವು ಮೊದಲ ಪತ್ರ ಬರೆದದ್ದು ಯಾವಾಗ? ಅಥವಾ ಕೊನೆಯ ಪತ್ರ ಬರೆದದ್ದು ಯಾವಾಗ?
ಪಕ್ಕದ ಮನೆಯವರು ಪತ್ರ ಓದಿ ಎಂದು ಅವರಿಗೆ ಬಂದ ಪತ್ರವನ್ನು ನಿಮ್ಮ ಕೈಗಿಡುವಾಗ ನಿಮ್ಮ ಅನುಭವ ಹೇಗಿತ್ತು, ನಮ್ಮ ಮನೆಯ ಪಕ್ಕದ ಮನೆಯವನಿಗೆ ಅವನ ಮಗನಿಂದ ಪತ್ರ ಬಂದಿತ್ತು. ಬೆಂಗಳೂರಲ್ಲಿ ಇದ್ದ ಅವನು ತಾನು ಎಕ್ಸಂನಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ ಎಂದು (ಅವನು ಏನು ಓದುತ್ತಿದ್ದ ಎಂದು ನನಗೆ ನೆನಪಿಲ್ಲ ) ತಿಳಿಸಿ ಪತ್ರಬರೆದಿದ್ದ. ಪಕ್ಕದ ಮನೆಯವ ಅವರ ಮನೆಗೆ ಯಾರೇ ಬಂದರೂ ನನ್ನ ಕರೆಸಿ ಅವರ ಮುಂದೆ ಪತ್ರ ಓದಿಸಿ ಅವರಿಗೆ ಸ್ವೀಟ್ ಕೊಡುತ್ತಿದ್ದ. ( ಓದಿದ ನನಗೂ ಸಿಗುತ್ತಿತ್ತು ಇದೊಂದೇ ಕಾರಣಕ್ಕೆ ನಾನು ಅವರು ಕರೆಡೊಡನೆ ಓಡಿ ಹೋಗುತ್ತಿದ್ದೆ. ) ಈಗ ಅವರು ನಮ್ಮ ಪಕ್ಕದಲ್ಲಿ ಮನೆಯಲ್ಲಿ ಇಲ್ಲ ಆದರೂ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಓದಿದಾಗಲೆಲ್ಲಾ ಅವರು ನೆನಪಾಗುತ್ತಾರೆ.
ಅಂದು ಯಾರಾದರೂ ಕಳುಹಿಸಿದ ಪತ್ರವನ್ನು ಹಾಗೇಯೇ ಇಟ್ಟುಕೊಳ್ಳುವುದು ಒಂದು ನೆನಪು ಎಂದು ಭಾವಿಸಲಾಗುತ್ತಿತ್ತು , ಈಗ ಕಳುಹಿಸಿದ ಮೇಸೇಜ್ ಸ್ಕ್ರೀನ್‍ಶಾಟ್ ತೆಗೆದರೆ ಏನೋ ಕಾದಿದೆ ಅಂತ ಅರ್ಥ ( ಪೋಲೀಸ್ ಕಂಪ್ಲೇಂಟ್ ಕೊಡಲು, ಬ್ಲಾಕ್‍ಮೇಲ್ ಮಾಡಲು ಒಟ್ಟಿನಲ್ಲಿ ಒಳ್ಳೆ ಕೆಲಸಕ್ಕಂತೂ ಈ ಸ್ಕ್ರೀನ್‍ಶಾಟ್ ಬಳಸಲ್ಲ ಬಿಡಿ )
ಅದೇನೇ ಇರಲಿ ಪತ್ರ ಬರೆಯುವಾಗ ಇರುವಷ್ಟು ಖುಷಿ ಮೆಸೇಜ್ ಮಾಡುವಾಗ ಇರಲ್ಲ. ಮೇಸೇಜ್ ನಲ್ಲಿ ನಿಮ್ಮ ಆಂತರ್ಯ ಕಾಣಲ್ಲ ಆದರೆ ಪತ್ರದಲ್ಲಿ ಖಂಡಿತಾ ಕಾಣುತ್ತದೆ, ಮೊನ್ನೆ ನನ್ನ ಫೇಸ್‍ಬುಕ್ ಸ್ನೇಹಿತರೊಬ್ಬರಿಗೆ ಇದೇ ಸಲಹೆಕೊಟ್ಟೆ ನಿಮಗೆ ಯಾರಮೇಲಾದರೂ ಕೋಪವಿದ್ದರೆ ಅವರ ಬಗ್ಗೆ ನಿಮಗನ್ನಿಸಿದ್ದನ್ನು ಬರೆದು /ಬೈದು ಒಂದು ಕಾಗದ ಬರೆಯಿರಿ ಅದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ ಸ್ವಲ್ಪದಿನದ ನಂತರ ಅದನ್ನು ಮತ್ತೆ ತೆರೆದು ಓದಿ ನಿಜಕ್ಕೂ ಎರಡು ವಿಷಯಗಳು ಬದಲಾಗಿರುತ್ತವೆ. ಮೊದಲನೆಯದಾಗಿ ನಿಮಗೆ ಅವರ ಮೇಲೆ ಕೋಪ ಹೋಗಿರುತ್ತದೆ, ಎರಡನೆಯದಾಗಿ ನೀವು ಒಳ್ಳೆಯ ಬರಹಗಾರರು ಎಂದು ನಿಮಗೇ ತೀಳಿಯುತ್ತದೆ. ಇದನ್ನೂ ನೀವೂ ಟ್ರೈ ಮಾಡಿ..
ನಿಮ್ಮವ:- ಒಂಟಿಪ್ರೇಮಿ
No comments:
Post a Comment