Monday, March 18, 2019

ಚಿಕ್ಕ ಕಥೆ

ಒಂದ್ ದಿನ ಕಾರವಾರ ಎಕ್ಸ್ ಪ್ರೆಸ್ಸಲ್ಲಿ ಒಬ್ಬ ಯುವಕ (ಸುಮಾರು 24-25 ವರ್ಷ ಇರಬಹುದು) ಅವರಪ್ಪನ ಜೊತೆ ಪ್ರಯಾಣ ಮಾಡ್ತಿದ್ನಂತೆ. ಬೇಕಂತ ಇಬ್ಬರೂ ಕಿಟಕಿ ಪಕ್ಕದ ಸೀಟ್ ತೊಗೊಂಡಿರ್ತಾರೆ... ಎದರಾ ಬದರಾ ಕೂತು ಮಾತಾಡ್ಕೊಂಡ್ ಬರಬಹುದು ಅಂತ.

ಟ್ರೇನ್ ಸ್ಟೇಶನ್ ಬಿಟ್ಟು ಒಂದೆರಡು ಗಂಟೆ ಆಗ್ತಿದ್ದಂಗೇ ಆ ಯುವಕ ಎಲ್ಲರಿಗೂ ಕೇಳಿಸೋ ಹಾಗೆ "ಅಪ್ಪಾ ನೋಡಪ್ಪಾ! ಮರಗಳೆಲ್ಲ ಹಿಂದ್-ಹಿಂದಕ್ಕೆ ಹೋಗ್ತಿವೆ!" ಅಂದನಂತೆ. ಅದನ್ನ ಕೇಳಿ ಅವರಪ್ಪ ಮುಗುಳ್ನಕ್ಕಿ ತನ್ನ ಪಾಡಿಗೆ ತಾನು ವಾಪಸ್ ಪೇಪರ್ ಓದೋದು ಮುಂದುವರೆಸ್ತಾನೆ.

ಆದರೆ ಪಕ್ಕದಲ್ಲಿ ಕೂತಿದ್ದೋರಿಗೆ ಸ್ವಲ್ಪ ಮುಜುಗರ... ಇದೇನಪ್ಪಾ ಒಳ್ಳೇ ತನ್ನ ಕಾಲ ಮೇಲೆ ತಾನು ನಿಂತು ಸಂಪಾದನೆ ಮಾಡೋ ವಯಸ್ಸಿನ ಹುಡುಗ ಹೀಗೆ ಹೇಳಿದನಲ್ಲ ಅಂತೆ...

ಅಷ್ಟರಲ್ಲಿ ಅವನು ಮತ್ತೆ "ಅಪ್ಪಾ ನೋಡು! ನೋಡು! ಮೋಡಗಳು ನಮ್ಮ ಜೊತೇನೇ ಬರ್ತಿವೆ...!" ಅಂತ ಹೇಳಿದನಂತೆ...

ಈ ಸಲ ಪಕ್ಕದಲ್ಲಿ ಕೂತಿದ್ದೋನು ಅವರಪ್ಪನಿಗೆ ಮೆಲ್ಲಗೆ ಕಿವಿಯಲ್ಲಿ ಹೇಳಿದನಂತೆ... "ನಿಮ್ಮ ಮಗನ್ನ ಯಾರಾದರೂ ಡಾಕ್ಟರ್ ಹತ್ತಿರ ತೋರಿಸೋದು ಒಳ್ಳೇದು..." ಅಂತ.

ಆಗ ಅವರಪ್ಪ "ಕರ್ಕೊಂಡ್ ಹೋಗಿದ್ದೆ... ಆಸ್ಪತ್ರೆಯಿಂದಾನೇ ವಾಪಸ್ ಬರ್ತಿದೀವಿ ಸಾರ್... ಎಷ್ಟೋ ವರ್ಷಗಳಿಂದ ಕಷ್ಟ ಪಡ್ತಾ ಇದ್ವಿ... ನನ್ನ ಮಗನಿಗೆ ಹುಟ್ಟಿನಿಂದ ಕಣ್ಣು ಕಾಣಿಸ್ತಾ ಇರಲಿಲ್ಲ... ಆದರೆ ದೇವರ ದಯೆಯಿಂದ ನೆನ್ನೆಯಿಂದ ಅವನಿಗೆ ಕಣ್ಣು ಕಾಣಿಸ್ತಿದೆ... ಇನ್ನೂ ಒಂದೆರಡು ಸಲ ಆಸ್ಪತ್ರೆಗೆ ಬನ್ನಿ ಅಂದಿದಾರೆ..." ಅಂದಾಗ ಪಕ್ಕದಲ್ಲಿದ್ದ ವ್ಯಕ್ತಿಗೆ ಬಾಯಲ್ಲಿ ಮಾತೇ ಹೊರಡಲಿಲ್ಲ...

ನೀತಿ: ಪ್ರತಿಯೊಬ್ಬರ ನಡತೆಗೂ ಒಂದು ಕಾರಣ ಇರುತ್ತೆ. ಅವರನ್ನ ನೋಡಿ ನಾವು ದುಡುಕಿ ಏನೇನೋ ಅನ್ಕೊಳೋದು ಅಷ್ಟು ಸರಿಯಲ್ಲ. ಅವರನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳದೆ ಅವರು ಹೀಗೆ ಅವರು ಹಾಗೆ ಅನ್ಕೊಂಡ್ರೆ ಒಂದೊಂದ್ಸಲ ಸತ್ಯ ತಲೆತಗ್ಗಿಸೋ ಹಾಗೆ ಮಾಡಬಹುದು...

Tuesday, July 3, 2018

ತಾಜ್ ಮಹಲ್ ಅಥವಾ ತೇಜೋ ಮಹಲ್

*ತಾಜ್ ಮಹಲ್ – ತೇಜೋ ಮಹಲ್*

ಭಾರತ ಎಂದೊಡನೆ ನಮಗೆ ನೆನಪಾಗುವುದು ಭವ್ಯ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿರುವ ದೇಶ ನಮ್ಮದು,

ತಾಜ್ ಮಹಲ್ ಬಗ್ಗೆ ಇತ್ತೀಚಿನ ಸುದ್ದಿಯೊಂದು ಅಂರ್ಜಾಲದಲ್ಲಿ ಹರಿದಾಡುತ್ತಿದೆ ಅದೆಂದರೆ, “ತಾಜ್ ಮಹಲ್ ಹಿಂದೂ ದೇವಾಲಯವಾಗಿತ್ತು ಶಹಜಹಾನ್ ಹಿಂದೂ ದೇವರ ಮೂರ್ತಿಯನ್ನ  ಕಿತ್ತೊಗೆದು ಅದನ್ನು ಮಮ್ತಾಜ್ ಸಮಾಧಿಯನ್ನಾಗಿ ಮಾಡಲಾಯಿತು.”
ಇದಕ್ಕೆ ಅಂತರ್ಜಾಲದಲ್ಲಿ ಅನೇಕ ಕಾರಣಗಳನ್ನು ಕೊಡುತ್ತಾರೆ,

ಈ ಲೇಖನ ಬರೆಯುವ ಮುಂಚೆ ನನ್ನನ್ನು ನಾನು ತುಂಬಾ ವಿಮರ್ಶೆ ಮಾಡಿಕೊಂಡಿದ್ದೇನೆ, ಯಾಕೆಂದರೆ  ಈ ವಿಷಯಕ್ಕೆ ಸಂಬಂದಿಸಿದಂತೆ ಜೂನ್ 11, 2012 ರಲ್ಲಿ ನಾನು ಒಂದು ಲೇಖನ ಬರೆದಿದ್ದೆ ಆ ಲೇಖನವನ್ನು ಈಗ ಓದಿದರೆ ನನಗೇ ನಗು ಬರುತ್ತದೆ, [ ನೀವೂ ಸಹ ಆ ಲೇಖನವನ್ನು ಒಮ್ಮೆ ಓದಿ. http://ontipremi.blogspot.com/2012/06/blog-post_11.html ] ನಾನು ಓಕ್ ಗೆ ಸಂಬಂಧಿಸಿದಂತೆ ಲೇಖನಗಳನ್ನು ಓದುವಾಗ ನಿಜಕ್ಕೂ ಅದೆಲ್ಲ ನಿಜ ಅಂತನೇ ಅನ್ನಿಸುತ್ತಿತ್ತು. ಆದರೆ ಈಗ ಅದನ್ನ ವಿಶ್ಲೇಷಣೆಗೆ ಒಳಪಡಿಸಿದಾಗ ಆಗ ನಾನು ಪೂರ್ವಗ್ರಹ ಪೀಡಿತನಾಗಿದ್ದೆ ಅಂತ ಸ್ಪಷ್ಟವಾಗಿದೆ. ಅದಿರಲಿ ವಿಷಯಕ್ಕೆ ಬರೊಣ.

ತಾಜ್ ಮಹಲ್ ಅಲ್ಲ ತೇಜೋ ಮಹಲ್ ಎಂಬುದಕ್ಕೆ ಡಾ|| ಓಕ್ ಕೊಡುವ ಕಾರಣಗಳನ್ನು ಹಾಗು ಸತ್ಯಾಂಶಗಳನ್ನು ಪರೀಶೀಲಿಸೋಣ.

1. ತಾಜ್ ಮಹಲ್ ನದಿ ದಂಡೆಯಮೇಲಿದೆ ಸಾಮಾನ್ಯವಾಗಿ ದೇವಾಲಯಗಳು ಮಾತ್ರ ನದಿ ದಂಡೆಯ ಮೇಲಿರುತ್ತವೆ.
** ನಿಜ, ಈ ವಾದವನ್ನು ಒಪ್ಪಬಹುದು, ಆದರೆ ನದಿ ದಡದಮೇಲೆ ಇರುವ ಕಟ್ಟಡಗಳೆಲ್ಲಾ ಹಿಂದೂಗಳದಲ್ಲ!! ಸಾಮಾನ್ಯವಾಗಿ ನಾಗರೀಕತೆಗಳು ಹುಟ್ಟುವುದೇ ನದಿ ಬಯಲುಗಳಲ್ಲಿ,

2. ತಾಜ್ ಮಹಲ್ ಗೋಡೆಯ ಮೇಲೆ ಹಾವಿನ/ ಕಮಲದ ಹೂವಿನ ಚಿತ್ರಗಲಿವೆ.

** ಕಟ್ಟಡವು ಸಂಪೂರ್ಣ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದೆ, ಅವರ ಬಾಗಿಲುಗಳು ಕಮಾನಿನ ಆಕಾರದಲ್ಲಿವೆ , ಅಂದರೆ ಆ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಕಲಾಶೈಲಿಗಳ ಸಂಮಿಶ್ರಣದಿಂದ ಹೊಸದೊಂದು ಶೈಲಿ ಹುಟ್ಟಿತ್ತು, ವಿಜಯ ನಗರದ ಕಾಲದಲ್ಲಿನ ಹಲವಾರು ಕಟ್ಟಡಗಳು ಇದೇ ಶೈಲಿಯಲ್ಲಿವೆ ಅಂದ ಮಾತ್ರಕ್ಕೆ ನಾವು ಅದನ್ನು ಮುಸ್ಲಿಂ ಕಟ್ಟಡಗಳು ಎಂದು ಕರೆಯುವಂತಿಲ್ಲ.  ಬಹುಷ ಹೊಸ ಶೈಲಿಯೊಂದನ್ನು ರೂಪಿಸಲು ಅಲ್ಲಿ ಪ್ರಯತ್ನಿಸಿರಬಹುದು, ನೆನಪಿರಲಿ: ಭಾರತದಲ್ಲಿ ಯಾವುದೇ ದೇವಾಯಯಕ್ಕೆ ಕಮಾನಿನ ಆಕಾರದ ಭಾಗಿಲುಗಳಿಲ್ಲ!!

3. ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವರ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.
** ಈ ವಾದದಲ್ಲೇ ಉತ್ತರ ಅಡಗಿದೆ, ತಾಜ್ ಮಹಲ್ ಬಗ್ಗೆ   ಎತ್ತದವ ದೇವಾಲಯದ ಬಗ್ಗೆಯೂ ಹೇಳಿಲ್ಲ.!! ಬಹುಶಃ ಆ ಭಾಗಕ್ಕೆ ಅವನು ಬೇಟಿ ನೀಡಿರದಿರ ಬಹುದು ಅಥವಾ ಅವನು ಬರೆದಿರುವ ಪುಸ್ತಕ/ಬರಹಗಳು ನಮಗೆ ಸಿಗದೇ ಇರಬಹುದು

ಒಂದು ವೇಳೆ ದೇವಾಲಯದ ಒಳಗಿನ ಮೂರ್ತಿಯನ್ನು ಮಾತ್ರ ತೆಗೆದು ಹಾಕಿ ನಂತರ ಮಮ್ತಾಜ್ ಶವವನ್ನು ಇಡಲಾಗಿದೆ ಎಂಬುದಾದರೆ, ಕಟ್ಟಡವು 90% ಮುಸ್ಲಿಂ ಶೈಲಿಯಲ್ಲಿದೆ, ಒಂದುವೇಳೆ ಸ್ವಲ್ಪಭಾಗ ಕೆಡವಿ ಮುಸ್ಲಿಂ ಕಟ್ಟಡವನ್ನಾಗಿ ಪರಿವರ್ತಿಸಿದರು ಎಂಬುದಾದರೆ , ಅಂತಹ ಬೃಹತ್ ಕಟ್ಟಡವನ್ನ ಕೆಡವಿ /ದುರಸ್ತಿಗೊಳಿಸುವ ಬದಲು ಹೊಸದನ್ನೇ ನಿರ್ಮಿಸುವುದು ಸುಲಭದ ಕೆಲಸ,

4. ಹಿಂದೂ ದೇವಾಲಯ ಕೆಡವಿ ತಾಜ್ ನಿರ್ಮಿಸಲಾಗಿದೆ .ತಾಜ್ ನ ನೆಲಮಾಳಿಗೆಯಲ್ಲಿ ಶಿವನ ಮೂರ್ತಿಗಳಿವೆ!!

ಸರಿ ಅಲ್ಲಿ ಇದ್ದಂತಹ ದೇವಾಲಯವನ್ನು ಕೆಡವಿ ತಾಜ್ ನಿರ್ಮಿಸಿದ್ದಾರೆ ಎಂದೇ ಅಂದುಕೊಳ್ಳೋಣ, ದೇವಾಲಯವನ್ನು ಕೆಡವಿದ ಮೇಲೆ ಅದರ ಅವಶೇಷಗಳನ್ನು ಯಾರೂ ಸಂರಕ್ಷಣೆ ಮಾಡಿ ಇಡುವುದಿಲ್ಲ, ದೇವಾಲಯವನ್ನು ಹಾಳುಮಾಡುವವನಿಗೆ ಆ ಮೂರ್ತಿಗಳನ್ನು ಸಂರಕ್ಷಣೆ ಮಾಡಬೇಕು ಅಂತ ಯಾಕೆ ಅನ್ನಿಸುತ್ತದೆ,?

ಇನ್ನು ಕೊನೆಯದಾಗಿ ನನಗನ್ನಿಸಿದ್ದು:, ತಾಜ್ ಮಹಲ್ ಯಾವುದೇ ಕಾರಣಕ್ಕೂ ತೇಜೋ ಮಹಲ್ ಅಲ್ಲ, ಕೆಲವರು ತೇಜೋ ಮಹಲ್ ಎನ್ನುತ್ತಾರೆ ಇನ್ನು ಕೆಲವರು ಅಗ್ರೇಶ್ವರ ಎನ್ನುತ್ತಾರೆ, ಕೆಲವರು ದೇವಾಲಯವನ್ನು ನಾಶಮಾಡಿ ಕಟ್ಟಿಸಿದನು ಎಂದರೆ ಇನ್ನು ಕೆಲವರು ದೇವರ ವಿಗ್ರಹಗಳನ್ನು ಮಾತ್ರ ತೆಗೆದು ಮುಸ್ಲಿಂ ಸಮಾಧಿ ನಿರ್ಮಿಸಿದರು ಎಂದು ಹೇಳುವರು ಅವರಲ್ಲೇ ಒಮ್ಮತವಿಲ್ಲ,,,

ಕೊನೆಯದಾಗಿ, ಅಮೃತಶಿಲೆಯಿಂದ ನಿರ್ಮಿಸಿದ ಹಿಂದೂ ದೇವಾಲಯಗಳನ್ನು ಹೆಸರಿಸಿ,

✍✍- *ಬಿ. ಬಿ*

Wednesday, March 7, 2018

ನಿಮಗೆ ಜಗಳವಾಡಲು ಬರುತ್ತಾ?

     ಇದೊಂದು ವಿಷಯದಲ್ಲಿ ನಾನು ತುಂಬಾ ಸೋತಿದ್ದೇನೆ ನನಗೆ ಜಗಳವಾಡಲು ಬರುವುದಿಲ್ಲ. ಯಾರೋ ಏನೋ ಅಂದರು ಎಂದು ಅವರ ವಿರುದ್ಧ ದ್ವೇಷಕಾರುತ್ತಾ ಕೂರುವುದಿಲ್ಲ, ಮಾತಿನಲ್ಲೇ ಬಗೆಹರಿಸಿಕೊಳ್ಳುವುದಾದರೆ ಜಗಳವೇಕೆ ಎಂಬುದು ನನ್ನ ಸಿದ್ದಾಂತ, ನನ್ನ ಟೀಕಿಸುವುದರಿಂದ, ನನ್ನ ಬೈಯ್ಯುವುದರಿಂದ ಅವರಿಗೆ ಸ್ವಲ್ಪ ಖುಷಿ ಸಿಗುವುದಾದರೆ 'ಸಿಗಲಿ ಪಾಪ, ಅವರು ಖುಷಿಯಾಗಿದ್ದು ಎಷ್ಟು ದಿನವಾಯಿತೋ ಏನೋ' ಅನ್ನುವಷ್ಟು ಮಟ್ಟಿಗೆ ನಾನು ಜಗಳದ ವಿರೋಧಿ. ಹಾಗಂತ ನಾನು ಇದುವರೆಗೂ ಜಗಳವಾಡಿಯೇ ಇಲ್ಲವೆಂದಲ್ಲ ಕೊನೆಯದಾಗಿ ಜಗಳವಾಡಿದ್ದು ನನಗೆ ನೆನಪಿಲ್ಲ !! 

ಮನುಷ್ಯನ ಆಯಸ್ಸು ಇರುವುದೇ 70-80 ವರ್ಷಗಳು (ಅದೂ ಕೂಡ ಗ್ಯಾರಂಟಿ ಇಲ್ಲ ) ಜಗತ್ತಿನಲ್ಲಿ ನಾವು ನೋಡದೇ ಇರುವ ಅತ್ಯಂತ ಸುಂದರವಾದ ಸ್ಥಳಗಳು, ಒಮ್ಮೆಯೂ ಬೇಟಿಯಾಗದ ಅದ್ಬುತ ವ್ಯಕ್ತಿಗಳು,,, ಅಬ್ಬಾ!! ಇನ್ನೂ ಹತ್ತು ಜನ್ಮವೆತ್ತಿ ಬಂದರೂ ಓದಿ ಮುಗಿಸದಷ್ಟು ಪುಸ್ತಕಗಳಿವೆ ಇದನ್ನೆಲ್ಲ ನಿಮಗೆ ಉಳಿದಿರುವ ಆಯಸ್ಸಿನಲ್ಲಿ ಪೂರ್ಣಗೊಳಿಸಲು ಸಾಧ್ಯವಾ? ಖಂಡಿತಾ ಇಲ್ಲ, ! ಹಾಗಾದರೆ ಮತ್ತೇಕೆ ಜಗಳಮಾಡುವಿರಿ ? 'ಹಂದಿಯ ಜೊತೆ ಜಗಳವಾಡಿದರೆ ಅದು ನಮ್ಮನ್ನು ಕೆಸರಿನಲ್ಲಿ ಎಳೆದುಕೊಂಡುಹೋಗಿ ತಾನು ಖುಷಿಪಟ್ಟು ನಮ್ಮನ್ನು ಮೂರ್ಖರನ್ನಾಗಿಸುತ್ತೆ'.!


ತಪ್ಪೇನಿಲ್ಲ ಕೋಪಿಸಿಕೊಳ್ಳುವುದು  ಆದರೆ  'ಕೊಚ್ಚೆಗೆ ಕಲ್ಲೆಸದರೆ ನಮಗೆತಾನೇ ಸಿಡಿಯುವುದು?' ಈ ಒಂದು ಕಾರಣಕ್ಕೆ ಅನೇಕ ಜಗಳಗಳು ನಮ್ಮ ಕೆಂಪು ಕಂಗಳ ಕೋಪಾಗ್ನಿ ಜ್ವಾಲೆಯಲ್ಲೇ ತಣ್ಣಗಾಗಿವೆ, ಸಂಸ್ಕಾರವಂತರಿಗೆ ಇನ್ ಬಿಲ್ಟ್ ಜಗಳ ತಡೆಯುವ ಶಕ್ತಿ ಇರುತ್ತದೆ, ಅವರು ಕೋಪಮಾಡಿಕೊಂಡು ಎದ್ದು ಜಾಗ ಖಾಲಿ ಮಾಡುತ್ತಾರೆ, ತೊಡೆ ತಟ್ಟಿ ರಸ್ತೆಗಿಳಿದು ಬಾಯಿಗೆ ಬಂದಂತೆ ಮಾತಾಡುವುದಿಲ್ಲ. ಇಂತವರ ಜಗಳ ಬಿಡಿಸುವುದು ತುಂಬಾ ಸುಲಭ ' ಅವನಿಗಂತೂ ಬುದ್ದಿಯಿಲ್ಲ ನೀವೂ ಹಾಗೇ ಮಾಡೋದು ಸರೀನಾ?' ಇದೊಂದು ಮಾತೂ ಸಹ ಎಷ್ಟೋ ಜಗಳಗಳನ್ನು ತಡೆದಿದೆ. 

ತುಂಬಾ ಜನರು ನಾವು ಜಗಳವಾಡದೇ ಇರುವುದನ್ನು ವೀಕ್ ನೆಸ್ ಎಂದು ಭಾವಿಸಿರುತ್ತಾರೆ ಹಾಗೆ ನೋಡಿದರೆ ಜಗಳವಾಡುವುದು ತುಂಬಾ ಸುಲಭ ಜಗಳವಾಡದೇ ಅವಡುಗಚ್ಚಿ ಸುಮ್ಮನಿರುವುದು ತುಂಬಾ ಕಷ್ಟ. 'ಯಾವನೋ ಕೆಲಸಕ್ಕೆ ಬಾರದ ಮಾತನ್ನಾಡಿದ ಎಂದು ಸುಮ್ಮನಿರುವುದು ಬುದ್ದಿವಂತರ ಲಕ್ಷಣ.'

ಒಮ್ಮೆ ಯೋಚನೆ ಮಾಡಿ ನಾವು ಎಂಥಹ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ, ಬದುಕು ಸುಂದರವಾಗಿದೆ. ಯಾರೋ ನಮ್ಮ ಸಮಯದ ಹತ್ತು ನಿಮಿಷ ಹಾಳುಮಾಡಿದರೆಂದು ಕೊರಗುವ ನಾವು ಯಾರೊಂದಿಗೋ ಜಗಳಕ್ಕಿಳಿದು ವೃಥಾ ಸಮಯ ಹಾಳುಮಾಡಿಕೊಳ್ಳುತ್ತಿದ್ದೇವೆ.
ಇವೆಲ್ಲವುಗಳ ಮಧ್ಯೆ ನಮ್ಮ ಮಾನಸಿಕ ನೆಮ್ಮದಿಯನ್ನೂ ಹಾಳು ಮಾಡಿಕೊಳ್ಳುತ್ತೇವೆ. ದ್ವೇಷದ ಮೊಟ್ಟೆಗೆ ಕಾವು ಕೊಡುತ್ತೇವೆ. ದ್ವೇಷ ಯಾವತ್ತೂ ನಮ್ಮನ್ನೇ ಸುಡುತ್ತದೆ. ಅದಕ್ಕೆ ಸಮಯ ವ್ಯಯಿಸಲೇಬಾರದು. ನಮ್ಮ ಮೇಲೆ ಕಲ್ಲೆಸೆದವರಿಗೆ ತಿರುಗಿ ನಾವು ಕಲ್ಲೆಸೆದು ಮೈ ಕೈ ನೋಯಿಸಿಕೊಳ್ಳುವ ಬದಲು, ಅವರ ಕಲ್ಲೆಸೆತದಿಂದ ತಪ್ಪಿಸಿಕೊಂಡು, ಆ ಕಲ್ಲಿನಿಂದಲೇ ಸೌಧ ನಿರ್ಮಿಸಿಕೊಳ್ಳುವುದು ಸಕಾರಾತ್ಮಕ ಮತ್ತು ಬುದ್ದಿವಂತಿಕೆಯ ನಡೆವಳಿಕೆ!

ಅಷ್ಟಕ್ಕೂ ಜೀವನ ಅಂದ್ರೆ ಈ ಜಗಳಗಳೇ ಅಲ್ಲವಲ್ಲ. ಅದು ಯಾರಿಗೆ ಖುಷಿ ಕೊಡುತ್ತದೋ, ಕೊಡಲಿ ಬಿಡಿ. ಅದರಲ್ಲಿ ಅವರು ಖುಷಿ ಕಾಣಲಿ, ತಲ್ಲೀನರಾಗಲಿ, ತಕರಾರಿಲ್ಲ. ಆದರೆ ಜೀವನ ಅದಕ್ಕಿಂತಲೂ ರೋಚಕವಾಗಿದೆ ಎಂಬುದನ್ನು ಈ ಜೀವನವೇ ತೋರಿಸಿಕೊಟ್ಟಿದೆ. ಈ ಜೀವನ ಪ್ರೀತಿಯೇ ನಮ್ಮನ್ನು ಪೊರೆಯುವುದು. ಈ ಜಗಳ, ಬಡಿದಾಟ, ಹಗೆತನ ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಕೊಂಡೊಯ್ಯುವುದಿದ್ದರೆ ಇನ್ನಷ್ಟು ಕೆಳಕ್ಕೇ ಹೊರತು ಮೇಲಕ್ಕಲ್ಲ.!

ನಿಮ್ಮವ:- ಒಂಟಿಪ್ರೇಮಿ

ನಾನು ಬರೆಯುತ್ತಾ ಹೋಗಬೇಕು, ನೀನು ಪ್ರೀತಿಸುತ್ತಾ ಹೋಗು..

ನಾಲ್ಕಾಣೆ ಪತ್ರ ತೆಗೆದುಕೊಂಡು ಒಂದು ಮೂಲೆಯಲ್ಲಿ ಕ್ಷೇಮ ಎಂದು ಬರೆದು ಮಧ್ಯದಲ್ಲಿ ಶ್ರೀ ಎಂಥಲೋ ಓಂ ಎಂಥಲೋ ಬರೆದು ಇನ್ನೊದು ಮೂಲೆಯಲ್ಲಿ ದಿನಾಂಕ ಬರೆದು ಪತ್ರ ಬರೆಯುತ್ತಿದ್ದ ರೀತಿ. ಎಂದೋ ಬರೆದ ಪತ್ರ ಇನ್ನೆಂದೋ ಬಂದು ಸೇರುತ್ತಿತ್ತು . ಒಮ್ಮೊಮ್ಮೆ ಕಳುಹಿಸಿದ ಪತ್ರಗಳು ಹಲವು ತಿಂಗಳ ನಂತರ ತಲುಪುತ್ತಿದ್ದವು. ಒಮ್ಮೆ ನಮ್ಮ ಮಾವನ ಮಗನ ಹೆಂಡತಿ ಸತ್ತಗ ಕಳುಹಿಸಿದ ಪತ್ರವನ್ನಿಡಿದು ಹೋದ ನನ್ನಪ್ಪನಿಗೆ ಶಾಕ್ ಕಾದಿತ್ತು ಅಲ್ಲಿ ಅವನಿಗೆ ಇನ್ನೊಂದು ಮದುವೆ ನೆಡೆಯುತ್ತಿತ್ತು.!! ಇಂಥಾ ಉದಾಹರಣೆಗಳು ಅದೆಷ್ಟೋ..
ಪತ್ರಗಳಷ್ಟೇ ಅಲ್ಲ, ಬರವಣಿಗೆಯೇ ಕಣ್ಮರೆಯಾಗುತ್ತಿದೆ. ಮೆಸೇಜ್ ಟೈಪ್ ಮಾಡುವ ಕಾಲವೂ ದೂರ ಸಾಗುತ್ತಿದೆ ಮುಂದೇನಿದ್ದರೂ 'ಇಮೋಜಿ'ಗಳ ಕಾಲ,  ಹಾಯ್ ಹೇಳಲು  ಬಾಯ್ ಹೇಳಲು, ಕೊನೆಗೆ ದುಖಃ ಆಗ್ತಿದೆ ಅಂತ ಹೇಳಲೂ ಇಮೋಜಿಯೇ ಬೇಕು ಅದಿರಲಿ ಇದರಬಗ್ಗೆ ಮುದೊಂದು ದಿನ ಮಾತಾಡುವೆ...

ನನ್ನ ಬರವಣಿಗೆಯ ಮೊದಲ ಹೆಜ್ಜೆ ಪ್ರಾರಂಭವಾಗಿದ್ದೇ ಹುಡುಗಿಗೆ ಪ್ರೇಮ ಪತ್ರಬರೆಯುವ ಮೂಲಕ !! ಒಂದು ಹುಡುಗಿಗೆ ನೀವು ಎಷ್ಟು ಪುಟ ಪತ್ರ ಬರೆಯಬಹುದು? ಐದು, ಹತ್ತು, ನೂರು ?? ನಾನು ಬರೊಬ್ಬರಿ ಇನ್ನೂರು ಪುಟಗಳ ಎಂಟು ನೊಟ್‍ಬುಕ್ ಬರೆದಿದ್ದೆ.... ಈಗಲೂ ಹಳೆಯ ಪತ್ರಗಳನ್ನು ಓದುತ್ತಿದ್ದರೆ ಕೆಲವೊಮ್ಮೆ ನಗು ಬರುತ್ತದೆ, ನಿಜವಾಗಿಯೂ ಇಷ್ಟೊಂದು ಬರೆದದ್ದು ನಾನೇನಾ ಎಂದೆನಿಸುತ್ತದೆ, ಲೆಕ್ಚರ್ ಒಂದು ಪ್ರೋಜೆಕ್ಟ್ ಕೊಟ್ಟರೆ ಸಬ್ಮಿಟ್ ಮಾಡುವ ಹಿಂದಿನ ದಿನ ಬರೆಯುವ ನಾನು ಅಷ್ಟೊಂದು ಹೇಗೆ ಬರೆದೆ ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆ !

ಬರೆಯಲು ಪೆನ್ನು ಪೇಪರ್ ಇದ್ದರೆ ಸಾಲದು ಸ್ಪೂರ್ತಿಯೂ ಇರಬೇಕು. ಆ ಸ್ಪೂರ್ತಿಯೇ ಪ್ರೀತಿಯಾಗಿದ್ದರೆ ಪೆನ್ನಿಗೆ ಕ್ಯಾಪ್ ಹಾಕುವ ಅವಶ್ಯಕತೆಯೇ ಇರುವುದಿಲ್ಲ. ನಾನು ಗಮನಿಸಿದಂತೆ ತುಂಬಾ ಜನ ಕವಿಗಳು ಪ್ರೀತಿಯಿಂದ ಸ್ಪೂರ್ತಿಯಾದವರೇ.. ಅದು ಯಾರಮೇಲಾದರೂ ಅಥವಾ ಯಾವುದರಮೇಲಾದರೂ ಸರಿ.. ವಿಷಯಾಂತರ ಮಾಡಿದ್ದಕ್ಕೆ ಕ್ಷಮೆ ಇರಲಿ...

ನೀವು ಸ್ವಲ್ಪ ಹಿಂದೆ ಹೋಗಿ ಯೋಚಿಸಿ ಹೇಳಿ ನೀವು ಮೊದಲ ಪತ್ರ ಬರೆದದ್ದು ಯಾವಾಗ? ಅಥವಾ ಕೊನೆಯ ಪತ್ರ ಬರೆದದ್ದು ಯಾವಾಗ?
ಪಕ್ಕದ ಮನೆಯವರು ಪತ್ರ ಓದಿ ಎಂದು ಅವರಿಗೆ ಬಂದ ಪತ್ರವನ್ನು ನಿಮ್ಮ ಕೈಗಿಡುವಾಗ ನಿಮ್ಮ ಅನುಭವ ಹೇಗಿತ್ತು, ನಮ್ಮ ಮನೆಯ ಪಕ್ಕದ ಮನೆಯವನಿಗೆ ಅವನ ಮಗನಿಂದ ಪತ್ರ ಬಂದಿತ್ತು. ಬೆಂಗಳೂರಲ್ಲಿ ಇದ್ದ ಅವನು ತಾನು ಎಕ್ಸಂನಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ ಎಂದು (ಅವನು ಏನು ಓದುತ್ತಿದ್ದ ಎಂದು ನನಗೆ ನೆನಪಿಲ್ಲ ) ತಿಳಿಸಿ ಪತ್ರಬರೆದಿದ್ದ. ಪಕ್ಕದ ಮನೆಯವ ಅವರ ಮನೆಗೆ ಯಾರೇ ಬಂದರೂ ನನ್ನ ಕರೆಸಿ ಅವರ ಮುಂದೆ ಪತ್ರ ಓದಿಸಿ ಅವರಿಗೆ ಸ್ವೀಟ್ ಕೊಡುತ್ತಿದ್ದ. ( ಓದಿದ ನನಗೂ ಸಿಗುತ್ತಿತ್ತು ಇದೊಂದೇ ಕಾರಣಕ್ಕೆ ನಾನು ಅವರು ಕರೆಡೊಡನೆ ಓಡಿ ಹೋಗುತ್ತಿದ್ದೆ. ) ಈಗ ಅವರು ನಮ್ಮ ಪಕ್ಕದಲ್ಲಿ ಮನೆಯಲ್ಲಿ ಇಲ್ಲ ಆದರೂ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಓದಿದಾಗಲೆಲ್ಲಾ ಅವರು ನೆನಪಾಗುತ್ತಾರೆ.
ಅಂದು ಯಾರಾದರೂ ಕಳುಹಿಸಿದ ಪತ್ರವನ್ನು ಹಾಗೇಯೇ ಇಟ್ಟುಕೊಳ್ಳುವುದು ಒಂದು ನೆನಪು ಎಂದು ಭಾವಿಸಲಾಗುತ್ತಿತ್ತು , ಈಗ ಕಳುಹಿಸಿದ ಮೇಸೇಜ್ ಸ್ಕ್ರೀನ್‍ಶಾಟ್ ತೆಗೆದರೆ ಏನೋ ಕಾದಿದೆ ಅಂತ ಅರ್ಥ ( ಪೋಲೀಸ್ ಕಂಪ್ಲೇಂಟ್ ಕೊಡಲು, ಬ್ಲಾಕ್‍ಮೇಲ್ ಮಾಡಲು ಒಟ್ಟಿನಲ್ಲಿ ಒಳ್ಳೆ ಕೆಲಸಕ್ಕಂತೂ ಈ ಸ್ಕ್ರೀನ್‍ಶಾಟ್ ಬಳಸಲ್ಲ ಬಿಡಿ )

ಅದೇನೇ ಇರಲಿ ಪತ್ರ ಬರೆಯುವಾಗ ಇರುವಷ್ಟು ಖುಷಿ ಮೆಸೇಜ್ ಮಾಡುವಾಗ ಇರಲ್ಲ. ಮೇಸೇಜ್ ನಲ್ಲಿ ನಿಮ್ಮ ಆಂತರ್ಯ ಕಾಣಲ್ಲ ಆದರೆ ಪತ್ರದಲ್ಲಿ ಖಂಡಿತಾ ಕಾಣುತ್ತದೆ, ಮೊನ್ನೆ ನನ್ನ ಫೇಸ್‍ಬುಕ್ ಸ್ನೇಹಿತರೊಬ್ಬರಿಗೆ ಇದೇ ಸಲಹೆಕೊಟ್ಟೆ ನಿಮಗೆ ಯಾರಮೇಲಾದರೂ ಕೋಪವಿದ್ದರೆ ಅವರ ಬಗ್ಗೆ ನಿಮಗನ್ನಿಸಿದ್ದನ್ನು ಬರೆದು /ಬೈದು ಒಂದು ಕಾಗದ ಬರೆಯಿರಿ ಅದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ ಸ್ವಲ್ಪದಿನದ ನಂತರ ಅದನ್ನು ಮತ್ತೆ ತೆರೆದು ಓದಿ ನಿಜಕ್ಕೂ ಎರಡು ವಿಷಯಗಳು ಬದಲಾಗಿರುತ್ತವೆ.  ಮೊದಲನೆಯದಾಗಿ ನಿಮಗೆ ಅವರ ಮೇಲೆ ಕೋಪ ಹೋಗಿರುತ್ತದೆ, ಎರಡನೆಯದಾಗಿ ನೀವು ಒಳ್ಳೆಯ ಬರಹಗಾರರು ಎಂದು ನಿಮಗೇ ತೀಳಿಯುತ್ತದೆ. ಇದನ್ನೂ ನೀವೂ ಟ್ರೈ ಮಾಡಿ..
ನಿಮ್ಮವ:- ಒಂಟಿಪ್ರೇಮಿ

Sunday, July 7, 2013

ಗಾಂಧಿಯ ಒಳಗೊಬ್ಬ ಕಾಮುಕ


ಗಾಂಧಿಗೂ ಒಬ್ಬ ಪ್ರೇಯಸಿಯಿದ್ದಳು ಎಂಬ ಲೇಖನವನ್ನು ಇದೇ ಬ್ಲಾಗ್ ನಲ್ಲಿ ಓದಿಯೇ ಇರುತ್ತೀರಿ, ಈಗ ಮತ್ತೊಂದು ವಿಷಯ ಗಾಂಧೀಜಿಯ ಬಗ್ಗೆ ಬರೆಯಬೇಕಾಗಿದೆ. ದೇಶ/ನಾಡು/ಜನಗಳಿಗಾಗಿ ಎಲ್ಲಾ ತ್ಯಾಗಗಳಿಗೂ ಸಿದ್ದನಾದವವನನ್ನ ಮಹಾತ್ಮ ಎಂದು ಕರೆಯಲಾಗುತ್ತದೆ. ಆದರೆ ಮಹಾತ್ಮ ಎಂದೆನಿಸಿಕೊಳ್ಳುವ ಯೋಗ್ಯತೆ ಗಾಂಧಿಜಿಗೆ ಇದೆಯಾ? ಈ ಲೇಖನ ಓದಿದಮೇಲೆ ನೀವೇ ತೀರ್ಮಾನ ಮಾಡಿ,,,
ಇಳಿವಯಸ್ಸಿನ ಗಾಂಧೀಜಿಯನ್ನು ಕಂಡವರು ಅವರ ಊರುಗೋಲಾಗಿ ಸದಾಕಾಲವೂ ಇರುತ್ತಿದ್ದ ಆ ಮತ್ತೊಬ್ಬ ಮುಗ್ಧ ವ್ಯಕ್ತಿಯನ್ನು ಜಗತ್ತು ಮರೆತಿರಲು ಸಾಧ್ಯವೇ ಇಲ್ಲ. 1946ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಗಾಂಧೀಜಿಯ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಆ ವ್ಯಕ್ತಿ ಮನುಬೆನ್. ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗಕ್ಕೆ ಅವರ ಮರಿಮಗಳಾದ ಮನುಬೆನ್ ಊರ್ಫ್ ಮೃದುಲಾ ಗಾಂಧಿ ತಮ್ಮನ್ನೇ ಒಡ್ಡಿಕೊಂಡಿದ್ದರು.
ಆಕೆ ತೀರಿಹೋಗಿ ನಾಲ್ಕು ದಶಕಗಳೇ ಸಂದುಹೋಗಿವೆ. ಇಷ್ಟು ವರ್ಷಗಳ ಕಾಲ ಸುದ್ದಿಯಲ್ಲಿ ಇರದಿದ್ದ ಮನುಬೆನ್ ಅವರು ಇದ್ದಕ್ಕಿದ್ದಂತೆ ಸುದ್ದಿಗೆ ಗ್ರಾಸವಾಗಿದ್ದಾರೆ. 1943ರಿಂದ ಗಾಂಧೀಜಿ ಹತ್ಯೆಯಾಗಿ ಇಪ್ಪತ್ತು ದಿನಗಳವರೆಗೆ ಪ್ರತಿದಿನವೂ ಬರೆದ ಡೈರಿ ಅನೇಕ ವಿಸ್ಮಯಕಾರಿ ಮತ್ತು ತಿಳಿದಿರದ 'ನಗ್ನ' ಸತ್ಯ ಸಂಗತಿಗಳನ್ನು ಬಯಲು ಮಾಡಿದೆ. ಎರಡು ಸಾವಿರ ಪುಟಗಳಷ್ಟು ಇರುವ 10 ಡೈರಿಗಳ ಹೂರಣವನ್ನು ಇಂಡಿಯಾ ಟುಡೆ ಪತ್ರಿಕೆ ಪ್ರಕಟಿಸಿ ಸಂಚಲವನ್ನೆಬ್ಬಿಸಿದೆ.
ಗಾಂಧೀಜಿ ತನ್ನನ್ನು ತಾಯಿಯಂತೆ ಸಲಹುತ್ತಿದ್ದರು ಎಂದು ಹೇಳಿರುವ ಮನುಬೆನ್ ಯಾರಿಗೂ ತಿಳಿಯದ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಕಟು ಬ್ರಹ್ಮಚರ್ಯ ಪ್ರಯೋಗದ ಮುಖಾಂತರ ಮಾನವೀಯತೆಯ ಪಾಠಗಳನ್ನು ಕಲಿಸಿದ ಗಾಂಧೀಜಿಯವರ ಬಗ್ಗೆ ಯಾರಿಗೂ ಹಗುರವಾಗಿ ಮಾತನಾಡುವ ಹಕ್ಕಿಲ್ಲ, ಅದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಮನೆಯನ್ನು ಹತ್ತಿಕ್ಕಲು ಗಾಂಧೀಜಿ ಮಾಡುತ್ತಿದ್ದ ಬ್ರಹ್ಮಚರ್ಯದ ಪ್ರಯೋಗದಿಂದಾಗಿ ತಮ್ಮ ಮೇಲಾದ ಮಾನಸಿಕ ಪರಿಣಾಮಗಳ ಬಗ್ಗೆಯೂ ಅವರು ವಿಸ್ತೃತವಾಗಿ ಬರೆದಿದ್ದಾರೆ.
ಅವರ ಡೈರಿಯಲ್ಲಿನ ಒಂದು ಪ್ಯಾರಾ ಹೀಗಿದೆ : "ಇಂದು ರಾತ್ರಿ, ಸುಶೀಲಾಬೆನ್, ನಾನು ಮತ್ತು ಬಾಪು (ಗಾಂಧೀಜಿ) ಒಂದೇ ಮಂಚದ ಮೇಲೆ ಮಲಗಿದ್ದಾಗ ಬಾಪು ತಬ್ಬಿಕೊಂಡರು ಮತ್ತು ಬೆನ್ನಮೇಲೆ ಸವರಿದರು. ಪ್ರೀತಿಯನ್ನು ಧಾರೆಯೆರೆದು ನನ್ನನ್ನು ಮಲಗಿಸಿದರು. ಬಹುದಿನಗಳ ನಂತರ ಅವರು ನನ್ನನ್ನು ಆಲಂಗಿಸಿದರು. ಆಗ, ತಮ್ಮೊಂದಿಗೆ ಮಲಗಿದರೂ ಲೈಂಗಿಕ ತುಡಿತದಿಂದ ದೂರವುಳಿದು ಮುಗ್ಧತೆ ಉಳಿಸಿಕೊಂಡಿದ್ದಕ್ಕೆ ಪ್ರಶಂಸಿಸಿದರು. ಆದರೆ, ಇದು ಇತರ ಹುಡುಗಿಯರಿಗೆ ಸಾಧ್ಯವಾಗಿರಲಿಲ್ಲ. ವೀಣಾಸ ಕಂಚನ್ ಮತ್ತು ಲೀಲಾವತಿ (ಇತಹ ಸಹವರ್ತಿಗಳು) ತಾವಿನ್ನೆಂದೂ ಬಾಪೂಜಿಯೊಂದಿಗೆ ಮಲಗುವುದಿಲ್ಲ ಎಂದು ಹೇಳಿದ್ದರು."
ಭಾರತ ಬಿಟ್ಟು ಚಳವಳಿಯ ನಂತರ ಅಸ್ವಸ್ಥರಾಗಿದ್ದ ಕಸ್ತೂರಬಾ ಅವರ ಶುಶ್ರೂಷೆಗೆಂದು ಬಂದಿದ್ದವರು ಮನುಬೆನ್. ಕಸ್ತೂರಬಾ ಅವರ ಕೊನೆಯುಸಿರಿರುವವರೆಗೂ ಅವರ ಆರೈಕೆ ಮಾಡಿದರು. ನಂತರ ಬಾಪೂಜಿಯ ಸೇವೆಗೆ ನಿಂತರು. ಮನುಬೆನ್ ಅವರ ಸೇವೆಯನ್ನು ಅವರನ್ನು ಅಪಾರವಾಗಿ ಪ್ರೀತಿಸಿದ್ದ ಪ್ಯಾರೆಲಾಲ್ ಅವರು ಕೂಡ ಶ್ಲಾಘಿಸಿದ್ದಾರೆ. "ತಾಯಿ ಮಗಳನ್ನು ನೋಡಿಕೊಂಡಂತೆ ಬಾಪೂಜಿ ಮನುಬೆನ್‌ಳನ್ನು ನೋಡಿಕೊಂಡಿದ್ದರು. ಆಕೆಯ ವಿದ್ಯಾಭ್ಯಾಸ, ಆಹಾರ, ಬಟ್ಟೆ, ಮಲಗುವ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ತನ್ನ ತಾಯಿಯೊಂದಿಗೆ ಮಲಗಲು ಮಗಳು ಮುಜುಗರಪಟ್ಟುಕೊಳ್ಳುವುದಿಲ್ಲ" ಎಂದು ಪ್ಯಾರೆಲಾಲ್ ಮನುಬೆನ್ ಮುಗ್ಧತೆಯನ್ನು ಕೊಂಡಾಡಿದ್ದರು.
ಮನುಬೆನ್ ಅವರಿಗೆ ಪ್ಯಾರೆಲಾಲ್ ಅವರಿಂದ ಮದುವೆಯ ಪ್ರಸ್ತಾಪವೂ ಬಂದಿತ್ತು. ಅದನ್ನು ತಳ್ಳಿಹಾಕಿದ್ದ ಅವರು ಹೀಗೆ ಬರೆದಿದ್ದರು : "ತನ್ನ ಸೋದರನ್ನು ಮದುವೆಯಾಗೆಂದು ಸುಶೀಲಾಬೆನ್ ದುಂಬಾಲುಬಿದ್ದಿದ್ದರು. ಸಹೋದರನನ್ನು ಮದುವೆಯಾದರೆ ನರ್ಸ್ ಮಾಡುವುದಾಗಿ ಪುಸಲಾಯಿಸಿದ್ದರು. ಅದನ್ನು ತಳ್ಳಿಹಾಕಿ, ಇದರ ಬಗ್ಗೆ ಗಾಂಧೀಜಿ ಜೊತೆ ಪ್ರಸ್ತಾಪಿಸಿದ್ದೆ. ಅದಕ್ಕೆ ಅವರು, ಸುಶೀಲಾಬೆನ್ ತನ್ನ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇತ್ತೀಚಿನವರೆಗೆ ಆಕೆ ತನ್ನ ಮುಂದೆ ಬೆತ್ತಲಾಗಿ ಸ್ನಾನ ಮಾಡುತ್ತಿದ್ದಳು ಮತ್ತು ಮಲಗುತ್ತಿದ್ದಳು ಎಂದಿದ್ದರು. ನಾನು ಅತ್ಯಂತ ಶುದ್ಧವಾಗಿರಬೇಕು ಮತ್ತು ಬ್ರಹ್ಮಚರ್ಯ ಆಚರಿಸಲು ಸಹನಶೀಲೆಯಾಗಿರಬೇಕು ಎಂದಿದ್ದರು."
ಹೀಗೆ, ತಮ್ಮ ಮತ್ತು ಗಾಂಧೀಜಿ ನಡುವಿನ ಹಲವಾರು ವಿಷಯಗಳ ಬಗ್ಗೆ ಮನುಬೆನ್ ಸವಿಸ್ತಾರವಾಗಿ ತಮ್ಮ ಡೈರಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಗಾಂಧೀಜಿ ಸಾವಿನ ನಂತರವೂ ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಆಚರಿಸಿದ ಅವರು ಸುಮಾರು 21 ವರ್ಷಗಳ ಕಾಲ ಗುಜರಾತ್ ದಲ್ಲಿ ನೆಲೆಸಿದರು. ಅಲ್ಲಿ ಮಕ್ಕಳಿಗಾಗಿ ಶಾಲೆ, ಮಹಿಳೆಯರಿಗಾಗಿ ಭಗಿನಿ ಸಮಾಜ ಮುಂತಾದದವುಗಳನ್ನು ನಡೆಸಿದರು. ನಂತರ 1969ರಲ್ಲಿ ಏಕಾಂಗಿಯಾಗಿ ಜೀವಿಸಿ ದೆಹಲಿಯಲ್ಲಿ ಮರಣಹೊಂದಿದರು.
ಮುಂದುವರೆಯುವುದು…..

Thursday, November 8, 2012

ಲೈನ್ ಹೊಡಿಯೋದಾದರೆ

ನನಗೂ ಅರಿವಿರದೆ,
ನಿನಗೂ ಅರಿವಿರದೆ,
ತಪ್ಪೊಂದು ನಡೆಯಬಾರದೇ..?
ಆ ತಪ್ಪ ಮರೆತು,
ಸುಮ್ಮನೆ ನಕ್ಕು, ನಾವು -
ಮೊದಲಂತೆ ಇರಬಾರದೇ..?

-------------------------

ಲೈನ್ ಹೊಡಿಯೋದಾದರೆ ಹಿರಿಯ ಮಗಳಿಂದ ಶುರು ಮಾಡಿ. ಯಾರಿಗ್ ಗೊತ್ತು? ಅವಳ ತಂಗಿ ಇನ್ನೂ ಚೆನ್ನಾಗಿರಬಹುದು!

------------------
 ಅರಳಿದ ಹೂಗಳನ್ನು ಮಾತ್ರ
ದುಂಬಿಗಳು
ಮುದ್ದಿಸುತ್ತವಂತೆ
ನಲ್ಲ !

ಆದರೆ
ನೀನು ಮುಟ್ಟದೇ
ನಾನು ಅರಳುವುದೇ ಇಲ್ಲ !

------------------ ಒಂಟಿಪ್ರೇಮಿ

ನಮ್ಮ ಕನ್ನಡಿಗರು

ನಮ್ಮ
ಕನ್ನಡಿಗರು
ವೀರರು
ಶೂರರು
ಧೀರರು
ನವೆಂಬರ್
ಬರುವ
ತನಕ
ಏಳರು