ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡು ವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ ಅಂದ್ರೆ, ಅದಕ್ಕೆ ಬಣ್ಣ ಹಾಕಿದ್ದು ಹೆಚ್ಚಾಯಿತು ಅಂತಾರೆ. ಇಂಥವರು ಐಶ್ವರ್ಯ ರೈ ಅನ್ನು ನೋಡಿ, ಅವಳ ಮೂಗು ತುಸು ನೀಳವಾಗಿದಿದ್ದರೆ ಚೆನ್ನಾಗಿರುತ್ತಿದ್ದಳು ಎಂದು ಹೇಳಲು ಹಿಂದೇಟು ಹಾಕಲಾರರು.
ಇವರಿಗೆ ಯಾವುದರಲ್ಲೂ ಸಮಾಧಾನವಿಲ್ಲ. ಪ್ರತಿಯೊಂದರಲ್ಲೂ ದೋಷ ಹುಡುಕುತ್ತಾರೆ. ಕೊರಗು ಅವರ ಗುಣ. ಟೀಕೆ ಅಸ್ತ್ರ. ಅಪಸ್ವರವೇ ದನಿ. ನಕಾರಾತ್ಮಕತೆ ವ್ಯಕ್ತಿತ್ವ. ಇಂಥವರು ತಮಗೆ ಅಂಟಿದ ವ್ಯಾಧಿಯನ್ನು ಬೇರೆಯವರಿಗೂ ಅಂಟಿಸುತ್ತಾರೆ. ಎಂಥ ಸುಂದರ, ಹಿತಕರ ಪರಿಸರವನ್ನು ಬೇಕಾದರೂ ತಮ್ಮ ಒಂದು ಮಾತಿನಿಂದ ಹಾಳುಗೆಡವುತ್ತಾರೆ.
ಇಂಥವರು ಎಲ್ಲ ಆಫೀಸು, ಸಂಘಟನೆ, ಊರುಗಳಲ್ಲೂ ಇರುತ್ತಾರೆ ಹಾಗೂ ತಮ್ಮ ಇರುವಿಕೆಯನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾರೆ. ಇಂಥವರು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನು ಸಂದೇಹದಿಂದಲೇ ಗಮನಿಸುತ್ತಾರೆ. ಪ್ರತಿಯೊಂದರಲ್ಲೂ ಓರೆಕೋರೆಗಳನ್ನು ಹುಡುಕುತ್ತಾರೆ. ಹಾಗೆಂದು ಅಂಥ ಅವ್ಯವಸ್ಥೆ ಅಥವಾ ಓರೆಕೋರೆಗಳನ್ನು ತಾವೇ ಮುಂದಾಗಿ ಸರಿಪಡಿಸಲಾರರು. ಪರಿಹಾರ ಹುಡುಕಲಾರರು. ಅವರದ್ದೇನಿದ್ದರೂ ತಪ್ಪುಗಳನ್ನಷ್ಟೇ ಹುಡುಕುವುದು. ಉಳಿದ ಯಾವ ಕೆಲಸವೂ ಅವರಿಗೆ ಸಂಬಂಧವಿಲ್ಲ.
ಇಂಥವರು ತಾವಾಗಿ ಯಾವ ಕೆಲಸವನ್ನೂ ಮಾಡಲಾರರು. ಇತರರು ಮಾಡಿದ್ದನ್ನು ಟೀಕಿಸಬಲ್ಲರು. ಒಂದು ವ್ಯವಸ್ಥೆಯನ್ನು ಹೇಗೆ ಸರಿಪಡಿಸಬಹುದು ಎಂದು ಕೇಳಿದರೆ ಇವರಲ್ಲಿ ಉತ್ತರವಿರುವುದಿಲ್ಲ. ಆ ವ್ಯವಸ್ಥೆಯಲ್ಲಿ ಇರುವ ದೋಷಗಳೇನು ಎಂಬುದರ ಉದ್ದ ಪಟ್ಟಿ ಇವರಿಗೆ ಬಾಯಿ ಪಾಠದಷ್ಟು ಸುಲಲಿತ.
ಇದು ಕೇವಲ ಸ್ವಭಾವ ಅಲ್ಲ. ಇದೊಂದು ಮಾನಸಿಕ ರೋಗ. ಇಂಥವರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇಂಥ ಗುಣ ಹೊಂದಿರುವವರು ಎಲ್ಲರ ತಿರಸ್ಕಾರಕ್ಕೆ ಪಾತ್ರರಾಗುತ್ತಾರೆ. ಎಲ್ಲರೂ ಇವರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಅದೆಷ್ಟೇ ಉತ್ತಮ ಆಫೀಸು, ಪರಿಸರವೇ ಇರಬಹುದು, ಅಲ್ಲಿ ಸಣ್ಣ ಪುಟ್ಟ ನ್ಯೂನತೆಗಳಿರುವುದು ಸಹಜ. ಅಂಥ ಹೊಳೆವ ಸೂರ್ಯನೂ ಗ್ರಹಣ ಕಾಲದಲ್ಲಿ ಮಂಕಾಗುತ್ತಾನೆ. ನ್ಯೂನತೆಗಳೇ ಪ್ರಮುಖ ವಾಗಬೇಕಿಲ್ಲ. ಅವನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಹಾಗೂ ಸರಿಪಡಿಸುವ ಕಳಕಳಿ ನಮ್ಮದಾಗಬೇಕು. ಅಪಸ್ವರವನ್ನು ಎತ್ತಲೇಬೇಕಾದ ಪ್ರಸಂಗ ಅನಿವಾರ್ಯವಾದರೆ ನೀವು ಕೊನೆಯ ವರಾಗಿ ಹಾಗೂ ಅದು ಸರಿಪಡಿಸುವುದರಲ್ಲಿ ಮೊದಲನೆ ಯವರಾಗಿ.