‘ಯಾಕೆ ಅಳ್ತಾ ಇದೀಯಾ ಅಮ್ಮ?’ ಎಂದು ಚಿಕ್ಕ ಹುಡುಗನೊಬ್ಬ ತನ್ನ ತಾಯಿಗೆ ಕೇಳಿದ. ‘ಯಾಕಂದ್ರೆ ನಾನು ಹೆಣ್ಣು’ ಎಂದುತ್ತರಿಸಿದಳು ಅವನ ತಾಯಿ.’ಅರ್ಥ ಆಗಲಿಲ್ಲ’ ಎಂದ ಆ ಹುಡುಗ. ಅವನನ್ನು ತಬ್ಬಿಕೊಂಡು ಮುತ್ತುಕೊಟ್ಟು ಅವನ ತಾಯಿ ಹೇಳಿದಳು, ‘ನಿನಗೆ ಎಂದಿಗೂ ಅರ್ಥ ಆಗುವುದಿಲ್ಲ!’
ನಂತರ ತಂದೆ ಬಳಿ ಓಡಿದ ಹುಡುಗ ‘ಅಪ್ಪ, ಕಾರಣವಿಲ್ಲದೆ ಹೆಂಗಸರು ಏಕೆ ಅಳುತ್ತಾರೆ?’ ಎಂದು ಕೇಳಿದ. ‘ಅಳುವುದಕ್ಕೆ ಅವರಿಗೆ ಕಾರಣ ಬೇಕಿಲ್ಲ’ ಎಂದು ಅವರಪ್ಪ ನಕ್ಕ!
ಕಾಲ ಸರಿಯಿತು. ಆ ಹುಡುಗ ಯುವಕನಾಗಿದ್ದ. ಆದರೂ ಹೆಂಗಸರೇಕೆ ಅಳುತ್ತಾರೆ ಎನ್ನುವ ಪ್ರಶ್ನೆಗೆ ಮಾತ್ರ ಆತನಿಗೆ ಉತ್ತರ ಸಿಕ್ಕಿರಲಿಲ್ಲ. ಕೊನೆಗೊಂದು ದಿನ ಈ ಪ್ರಶ್ನೆಗೆ ಉತ್ತರಿಸುವಂತೆ ದೇವರಿಗೆ ಮೊರೆಯಿಟ್ಟ! ಪ್ರತ್ಯಕ್ಷನಾದ ದೇವರು ಹೇಳಿದ-“ಮಗು… ನಾನು ಹೆಣ್ಣನ್ನು ಎಲ್ಲರಿಗಿಂತ, ಎಲ್ಲದಕ್ಕಿಂತ ಭಿನ್ನವಾಗಿ ಸೃಷ್ಟಿಸಿದೆ. ಹಾಗಾಗೇ ಪ್ರಪಂಚದ ಭಾರವನ್ನೆಲ್ಲ ಹೊರುವ ಶಕ್ತಿ ಆಕೆಯ ಗಟ್ಟಿ ಭುಜಗಳಿಗಿದೆ, ಜೊತೆಗೆ ಒಬ್ಬರಿಗೆ ಆಸರೆಯಾಗಬಲ್ಲಷ್ಟೂ ಅವು ಮೃದುವಾಗಿವೆ. ಮಕ್ಕಳನ್ನು ಹಡೆಯುವಾಗ ಆಗುವ ತೀವ್ರ ನೋವನ್ನು ಆಕೆ ಸಹಿಸಿಕೊಳ್ಳಬಲ್ಲಳು, ಜೊತೆಗೆ ತನ್ನ ಮಕ್ಕಳು ದೊಡ್ಡವರಾದ ಮೇಲೆ ಕೊಡುವ ನೋವನ್ನೂ ಕೂಡ. ಕುಟುಂಬದಲ್ಲಿ ಎಲ್ಲರೂ ಕೈಚೆಲ್ಲಿ ಕುಳಿತಾಗ ತಾನೊಬ್ಬಳೇ ಎದ್ದು ಎಲ್ಲರ ಸಹಾಯಕ್ಕೂ ಧಾವಿಸುವ ಶಕ್ತಿಯನ್ನು, ತನಗೆ ಸುಸ್ತಾದರೂ ಮನೆಯವರ ಶುಶ್ರೂಶೆ ಮಾಡುವ ದೊಡ್ಡ ಮನಸ್ಸನ್ನು ನಾನು ಆಕೆಗೆ ಕೊಟ್ಟಿದ್ದೇನೆ. ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರ ಮೇಲೆ ಆಕೆಗೆ ಎಂದಿಗೂ ಪ್ರೀತಿ ಕಡಿಮೆ ಆಗುವುದಿಲ್ಲ. ಪತಿ ಮಾಡಿದ ತಪ್ಪನ್ನೆಲ್ಲ ಕ್ಷಮಿಸುವ, ಕಷ್ಟಕಾಲದಲ್ಲಿ ಆತನಿಗೆ ಬೆನ್ನೆಲುಬಾಗಿ ನಿಲ್ಲುವ ಶಕ್ತಿ ಆಕೆಗಿದೆ.
ಕೊನೆಯದಾಗಿ ನಾನಾಕೆಗೆ ಕಣ್ಣೀರು ಹರಿಸುವ ಶಕ್ತಿಯನ್ನೂ ಕೊಟ್ಟೆ. ಭಾರ ಹೆಚ್ಚಾದಾಗ, ನೋವು ತೀವ್ರವಾದಾಗ, ಸಂತೋಷವಾದಾಗ ಆ ಭಾವನೆಗಳನ್ನೆಲ್ಲ ಕಣ್ಣೀರ ಮೂಲಕ ವ್ಯಕ್ತಪಡಿಸಲಿ ಎಂಬ ಕಾರಣಕ್ಕೆ.
ನೋಡು ಮಗು, ಹೆಣ್ಣಿನ ಸೌಂದರ್ಯ ಆಕೆಯ ಉಡುಗೆಯಲ್ಲಿಲ್ಲ. ಆಕೆಯ ದೇಹಸಿರಿಯಲ್ಲಿಲ್ಲ. ಆಕೆಯ ಕಣ್ಣಿನಲ್ಲಿದೆ. ಏಕೆಂದರೆ ಆಕೆಯ ಹೃದಯವೆಂಬ ಪ್ರೀತಿಯ ನೆಲೆಗೆ ಆಕೆಯ ಕಣ್ಣುಗಳೇ ಬಾಗಿಲು. ಹೆಣ್ಣನ್ನು ಅರ್ಥ ಮಾಡಿಕೊ, ಆಗ ಆಕೆಯ ಕಣ್ಣೀರು ಅರ್ಥವಾಗುತ್ತದೆ!” ದೇವರು ಮಾತು ಮುಗಿಸಿದ…
No comments:
Post a Comment